ಕೋಲಾರ ಸ್ಪರ್ಧೆಯಿಂದ ಬಹುತೇಕ ಹಿಂದೆ ಸರಿದಿದ್ದಾರೆ ಸಿದ್ದರಾಮಯ್ಯನವರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಕುರಿತಾಗಿ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ದೆಹಲಿಯಿಂದ ವಾಪಸ್ ಆದ ಅವರು ಆಪ್ತರ ಜೊತೆಗೆ ಚರ್ಚೆ ನಡೆಸಿ ಸದ್ಯ ಅಧಿಕೃತವಾಗಿ ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದು ಘೋಷಣೆ ಮಾಡದೆ ಇದ್ದರೂ, ವರುಣವನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
ಈ ಬಾರಿ ಬೆಂಗಳೂರಿಗೆ ಹತ್ತಿರವಾಗಿರುವ ಕ್ಷೇತ್ರದ ಹುಡುಕಾಟದಲ್ಲಿದ್ದರು. ಕಳೆದ ಬಾರಿಯ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಈ ಬಾರಿ ಆರಂಭದಲ್ಲಿ ಅವರು ವರುಣಾದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂಬ ಮಾತಿತ್ತು. ಆದರೆ ಕೋಲಾರದಲ್ಲಿ ತಾನು ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರೂ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದರು. ಕೋಲಾರದಲ್ಲಿ ನಿರಂತರ ಪ್ರವಾಸವನ್ನೂ ಕೈಗೊಂಡಿದ್ದರು. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಮುಂದಾದ ಬೆನ್ನಲ್ಲೇ ಸ್ಥಳೀಯ ನಾಯಕರ ಭಿನ್ನಾಭಿಪ್ರಾಯ ಬಹಿರಂಗಗೊಂಡಿತ್ತು. ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣ ಸಿದ್ದರಾಮಯ್ಯ ಅವರ ತಲೆಕೆಡಿಸಿತ್ತು. ಆದರು ಸರಿಪಡಿಸಿಕೊಳ್ಳಲು ಸಿದ್ದರಾಮಯ್ಯ ಅವರು ಕೆ.ಎಚ್.ಮುನಿಯಪ್ಪ ಜೊತೆಗೆ ಎರಡು ಮೂರು ಸುತ್ತಿನ ಮಾತುಕತೆಯನ್ನು ನಡೆಸಿದ್ದರು. ಈ ನಡುವೆ ಕ್ಷೇತ್ರದಲ್ಲಿ ವಾರ್ ರೂಂ ಕೂಡಾ ತೆರೆದಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಅವರ ಕೋಲಾರ ಸ್ಪರ್ಧೆ ಬಹುತೇಕ ಖಚಿತವಾಗಿತ್ತು.

ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಎಲ್ಲವೂ ಬದಲಾವಣೆ ಆಗಿದೆ. ಕೋಲಾರದಲ್ಲಿ ಸ್ಪರ್ಧೆ ಕಠಿಣ ಎಂಬ ಸಮೀಕ್ಷಾ ವರದಿ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಸೂಚನೆಯನ್ನು ನೀಡಿದ್ದಾರೆ. ಕೋಲಾರಕ್ಕಿಂತ ವರುಣಾವನ್ನು ಆಯ್ಕೆ ಮಾಡಿಕೊಳ್ಳಿ ಎಂಬ ಸೂಚನೆ ಹೈಕಮಾಂಡ್ ನೀಡಿದೆ ಎಂಬುವುದು ಒಂದು ವಾದವಾಗಿದೆ. ಕೋಲಾರದಲ್ಲಿ ಸಿದ್ಧರಾಮಯ್ಯ ಸ್ಪರ್ಧೆ ಸುಲಭವಲ್ಲ ಎಂಬ ಮಾತು ಕೇಳಿಬರುತ್ತಿದೆ. ನಾಯಕರ ಭಿನ್ನಾಭಿಪ್ರಾಯ ಒಂದು ಕಡೆಯಾದರೆ, ಜೆ ಡಿ ಎಸ್, ಬಿಜೆಪಿ ಪಕ್ಷದವರ ಒಳಏಟಿನ ಆತಂಕವೂ ಇಂದು ಕಡೆಯಾಗಿದೆ.