ಧಾರವಾಡ: ಕೋರ್ಸ್ ಪ್ರವೇಶದಲ್ಲಿ ಶೇಕಡಾ 20ರಷ್ಟು ಮೀಸಲಾತಿ ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡಬೇಕು. ಜೊತೆಗೆ ಇದಕ್ಕೆ ಭೂಮಿ ಕೊಟ್ಟ ರೈತರ ಮಕ್ಕಳಿಗೆ ಆದ್ಯತೆ ಮತ್ತು ಅರ್ಹತೆಗೆ ಅನುಗುಣವಾಗಿ ನೌಕರಿ ಕೊಡಬೇಕು ಎಂಬ ಬೇಡಿಕೆ ಇಡಲಾಗಿದೆ.
ಧಾರವಾಡದಲ್ಲಿ ಐಐಟಿ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಇತೀಚೆಗೆ ಉದ್ಘಾಟಿಸಿದ್ದಾರೆ. ಅವರು ಐಐಟಿ ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸುತ್ತೆ ಅಂತಾ ಅಭಿಮಾನದಿಂದ ಹೇಳಿದ್ದರು. ಆದರೆ ಈಗಿನ ರಾಜಕೀಯ ಪಕ್ಷಗಳ ಮಧ್ಯೆ ಕ್ರೆಡಿಟ್ ಪಾಲಿಟಿಕ್ಸ್ ಜೊತೆಗೆ ಮೀಸಲಾತಿ ಬೇಡಿಕೆ ಪಾಲಿಟಿಕ್ಸ್ (Reservation Politics) ಕೂಡ ಶುರುವಾಗಿದೆ. ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ವ್ಯಾಪ್ತಿಯಲ್ಲಿ 535 ಎಕರೆ ವಿಶಾಲವಾದ ಪ್ರದೇಶದಲ್ಲಿ ತಲೆ ಎತ್ತಿರುವ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕ್ಯಾಂಪಸ್ ಉದ್ಘಾಟನೆ ಕಳೆದ ರವಿವಾರ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಎರಡೂ ಲಕ್ಷಕ್ಕೂ ಹೆಚ್ಚು ಜನರು ಕೂಡ ಸಾಕ್ಷಿಯಾಗಿದ್ದರು. ಆದರೆ ಉದ್ಘಾಟನೆಯ ದಿನ ನಿಗದಿಯಾದಾಗಿನಿಂದಲೂ ಮೋದಿ ಬರುತ್ತಿರೋದು ನಾವು ಮಾಡಿರೋ ಐಐಟಿ ಉದ್ಘಾಟಿಸೋದಕ್ಕೆ ಅಂತಾ ಕಾಂಗ್ರೆಸ್ ಟಾಂಗ್ ಕೊಡುತ್ತಲೇ ಇತ್ತು.
ಈಗ ಹೊಸದೊಂದು ಬೇಡಿಕೆ ಈ ಐಐಟಿ ವಿಷಯದಲ್ಲಿ ಶುರುವಾಗಿದ್ದು, ಇಲ್ಲಿರೋ ಕೋರ್ಸ್ ಪ್ರವೇಶದಲ್ಲಿ ಶೇಕಡಾ 20ರಷ್ಟು ಮೀಸಲಾತಿ ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡಬೇಕು. ಜೊತೆಗೆ ಇದಕ್ಕೆ ಭೂಮಿ ಕೊಟ್ಟ ರೈತರ ಮಕ್ಕಳಿಗೆ ಆದ್ಯತೆ ಮತ್ತು ಅರ್ಹತೆಗೆ ಅನುಗುಣವಾಗಿ ನೌಕರಿ ಕೊಡಬೇಕು ಎಂಬ ಬೇಡಿಕೆ ಇಡಲಾಗಿದೆ. ಈ ಹಿಂದೆ ಸ್ವತಃ ತಾನೇ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದಾಗ ಈ ಐಐಟಿ ಆಗಿದ್ದು ಎಂದು ಹೇಳುತ್ತಲೇ ಈ ಎರಡು ಬೇಡಿಕೆಗಳನ್ನು ಇಟ್ಟಿರೋದು ಮಾಜಿ ಸಚಿವ ವಿನಯ ಕುಲಕರ್ಣಿ. ಸದ್ಯ ಜಿಲ್ಲಾ ಪ್ರವಾಸ ನಿರ್ಬಂಧದಲ್ಲಿರೋ ಅವರು ವಿಡಿಯೋ ಸಂದೇಶದ ಮೂಲಕ ಈ ಬೇಡಿಕೆ ಮುಂದಿಟ್ಟಿದ್ದಾರೆ.
ಯಾವ ಜಾಗದಲ್ಲಿ ಈಗ ಐಐಟಿ ಕ್ಯಾಂಪಸ್ ನಿರ್ಮಾಣ ಆಗಿದೆಯೋ ಅದೆಲ್ಲವೂ ಕೆಐಎಡಿಬಿ ಸ್ವಾಧೀನಕ್ಕೊಳಪಟ್ಟಿದ್ದ ಜಮೀನು ಆಗಿತ್ತು. ಈ ಭಾಗದಲ್ಲಿ ಕೈಗಾರಿಕೆಗಳೇ ಹೆಚ್ಚಾಗಿದ್ದು, ಕೈಗಾರಿಕೆಗಳ ಸ್ಥಾಪನೆಯಾಗಿಯೇ ರೈತರಿಂದ ಕೆಐಎಡಿಬಿ ಈ ಜಮೀನುಗಳನ್ನು ಪಡೆದುಕೊಂಡಿತ್ತು. ಯಾವುದೇ ಕೈಗಾರಿಕೆಗೆ ಜಮೀನು ಕೊಟ್ಟರೆ ಅಲ್ಲಿ ಜಾಗ ಕೊಟ್ಟ ರೈತರ ಮಕ್ಕಳಿಗೆ ಅರ್ಹತೆಗೆ ಅನುಗುಣವಾಗಿ ನೌಕರಿ ಎಂಬ ಮೌಖಿಕ ಷರತ್ತು ಚಾಲ್ತಿಯಲ್ಲಿತ್ತು.

ಹೀಗಾಗಿ ರೈತರ ಮಕ್ಕಳಿಗೆ ಐಐಟಿಯಲ್ಲಿ ನೌಕರಿ ಕೊಡಬೇಕು ಎಂಬ ಬೇಡಿಕೆ ಬಂದಿದೆ. ಆದರೆ ಈ ಬೇಡಿಕೆಯನ್ನು ಹಾಗೂ ಮೀಸಲಾತಿ ಬೇಡಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿನ್ರಮವಾಗಿ ತಳ್ಳಿ ಹಾಕಿದ್ದಾರೆ. ಏಕೆಂದರೆ ಐಐಟಿ ಯಾವುದೇ ಕೈಗಾರಿಕೆಯಲ್ಲ. ಇದೊಂದು ವಿದ್ಯಾ ಸಂಸ್ಥೆ. ಕೆಐಎಡಿಬಿಯಿಂದ ಜಾಗ ತೆಗೆದುಕೊಂಡ ಕಾರಣಕ್ಕೆ ಹಾಗೆಲ್ಲ ನೌಕರಿ ಕೊಡೋದಕ್ಕೆ ಬರೋದಿಲ್ಲ.
ಇಲ್ಲಿರೋದು ಬೋಧಕ ಸಿಬ್ಬಂದಿ ಹಾಗೂ ತೀರಾ ಕಡಿಮೆ ಬೋಧಕೇತರ ಸಿಬ್ಬಂದಿ. ಕೈಗಾರಿಕೆ ಆಗಿದ್ದರೆ ಆ ರೀತಿ ಕೇಳಬಹುದಿತ್ತು ಎಂದಿದ್ದಾರೆ. ಅಲ್ಲದೇ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕು ಎನ್ನುವುದು ಈಡೇರುವಂತಹ ಬೇಡಿಕೆಯಲ್ಲ. ಈ ಹಿಂದಿನಿಂದಲೂ ದೇಶದಲ್ಲಿ ಅನೇಕ ಐಐಟಿಗಳಿಗೆ ಅಲ್ಲಿನವರೂ ನಮ್ಮ ರಾಜ್ಯಕ್ಕೆ ಮೀಸಲಾತಿ ಕೊಡಿ ಅಂತಾ ಮುಂದೆ ಬಂದ್ರೆ ಪ್ರತಿಭಾವಂತರಿಗೆ ತೊಂದರೆ ಆಗುತ್ತದೆ. ಹೀಗಾಗಿ ಈ ಎರಡೂ ಬೇಡಿಕೆ ಸರಿಯಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಒಟ್ಟಾರೆಯಾಗಿ ಈಗ ಐಐಟಿ ಕ್ಯಾಂಪಸ್ ಉದ್ಘಾಟನೆಯಾಗಿರುವ ಹೊತ್ತಿನಲ್ಲಿಯೇ ಚುನಾವಣೆಯೂ ಸಹ ಇರೋ ಹಿನ್ನೆಲೆಯಲ್ಲಿ ಈ ಐಐಟಿಯನ್ನು ಮುಂದಿಟ್ಟುಕೊಂಡು ಯಾರಿಗೆಲ್ಲ ಹೇಗೆ ಬೇಕೋ ಹಾಗೆ ಲಾಭ ಮಾಡಿಕೊಳ್ಳೋಕೆ ಮುಂದಾಗ್ತಾ ಇದ್ದಾರೆ. ಚುನಾವಣೆ ಮುಗಿಯೋವರೆಗೂ ಇನ್ನೂ ಏನೇನು ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.