ಉದ್ಘಾಟನೆಯಾಗಿ ಇನ್ನು ಒಂದು ವಾರವು ಕಳೆದಿಲ್ಲ ಅಷ್ಟರಲ್ಲಿ ತಡರಾತ್ರಿ ಸುರಿದ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಕೆರೆಯಂತಾಗಿದೆ. ಮಳೆಯ ಅವಾಂತರಕ್ಕೆ ಹೆದ್ದಾರಿಯಲ್ಲಿಯೇ ಏಕಾಏಕಿ ವಾಹನಗಳು ಕೆಟ್ಟು ನಿಂತಿದ್ದವು. ವಾಹನಗಳ ಮಧ್ಯ ಸರಣಿ ಅಪಘಾತಗಳು ಆಗುತ್ತಿವೆ, ಹಾಗೂ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ರಾಮನಗರ: ತಡರಾತ್ರಿ ಸುರಿದ ಭಾರಿ ಮಳೆಗೆ ನೂತನವಾಗಿ ನಿರ್ಮಿಸಿದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಸಂಪೂರ್ಣ ಜಲಾವೃತವಾಗಿದೆ. ತಾಲೂಕಿನ ಸಂಗಬಸವನದೊಡ್ಡಿ ಮೇಲ್ಸೇತುವೆ ಹೆದ್ದಾರಿ ಬಳಿ ನೀರು ನಿಂತು ಸಂಪೂರ್ಣ ಕೆರೆಯಂತಾಗಿದೆ. ಮಳೆಯ ಅವಾಂತರಕ್ಕೆ ಹೆದ್ದಾರಿಯಲ್ಲಿಯೇ ಏಕಾಏಕಿ ವಾಹನಗಳು ಕೆಟ್ಟು ನಿಂತಿದ್ದು, ವಾಹನಗಳ ನಡುವೆ ಸರಣಿ ಅಪಘಾತವಾಗುತ್ತಿದೆ. ಇದರ ಜೊತೆಗೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ 6 ದಿನಕ್ಕೇ ಈ ಅವಾಂತರವಾಗಿದೆ. ಇಷ್ಟೆಲ್ಲಾ ಅವಾಂತರ ಆದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ಸಂಬಂಧವೇ ಇಲ್ಲ ಅನ್ನುವ ರೀತಿಯಲ್ಲಿದೆ. ಹಾಗೂ ಮಳೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದಿತ್ತು. ಆದರೀಗ ಉದ್ಘಾಟನೆಯಾದ 6 ದಿನಕ್ಕೆ ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಎನ್ ಹೆಚ್ ಎ ಐ ಅಧಿಕಾರಿಗಳ ಇನ್ನು ಸ್ಥಳಕ್ಕೆ ಬಂದಿಲ್ಲವೆಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಯಾದಗಿನಿಂದ ವಿಪಕ್ಷಗಳ ಅರೋಪಗಳು ಹೆಚ್ಚುತ್ತಿವೆ. ರಾಮನಗರ ತಾಲೂಕಿನ ಬಸವನಪುರ ಬಳಿ ಮೇಲ್ಸೇತುವೆಯ ತಡೆಗೋಡೆಗೆ ಲಾರಿಯೊಂದು ಡಿಕ್ಕಿ ಹೊಡೆದು, ಲಾರಿ ಹಾಗೂ ಕಾರು ಚಾಲಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಆಗಮಿಸಿದ ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದರು. ಜಿಲ್ಲಾ ವ್ಯಾಪ್ತಿಯೊಂದರಲ್ಲೇ ಸಂಭವಿಸಿದ ಅಪಘಾತಗಳ ಸಂಖ್ಯೆ 110 ಕ್ಕೂ ಜಾಸ್ತಿ ಹೆಚ್ಚಿದ್ದು, 41 ಜನರು ಸಾವನಪ್ಪಿದ್ದಾರೆ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು 225 ಅಪಘಾತದಲ್ಲಿ 43 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಲಕ್ಷ್ಮೀಪುರ ಗೇಟ್-ಮಣಿಪಾಲ್ ಆಸ್ಪತ್ರೆವರೆಗಿನ ಹೆದ್ದಾರಿಯಲ್ಲಿ ಈವರೆಗೆ 30 ಆ್ಯಕ್ಸಿಡೆಂಟ್ ಕೇಸ್ನಲ್ಲಿ 8 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಸುಮಾರು 130 ಕಿಲೋ ಮೀಟರ್ ದೂರ ನಿರ್ಮಾಣವಾಗಿದೆ. ಬೆಂಗಳೂರಿನಿಂದ ಮಂಡ್ಯದವರೆಗೂ ಕಾಮಗಾರಿ ಪೂರ್ಣವಾಗಿದ್ದು, ಅಲ್ಲಲ್ಲಿ ಇನ್ನು ಕಾಮಗಾರಿ ನಡೆಯುತ್ತಿದೆ. ಸುಂದರವಾದ ರಸ್ತೆಯಲ್ಲಿ ವಾಹನಗಳ ವೇಗದ ಮಿತಿಗೆ ಇದುವರೆಗೂ ನಿರ್ಬಂದ ಬಿದ್ದಿಲ್ಲ. ಆದರೆ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ, ಅಪಘಾತದಿಂದಾಗಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಈ ಎಲ್ಲಾ ಅನಾಹುತಕ್ಕೆ ಬಿಜೆಪಿ ಪಕ್ಷವೇ ಕಾರಣ, ಬಿಜೆಪಿ ನಾಯಕರು ಕಾರಣ ಎಂದು ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಅಸಮಧಾನ ಹೊರಹಾಕಿದ್ದಾರೆ.