ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಬಂದು ಲಕ್ಷಾಂತರ ಎಕರೆ ಬೆಳೆ ನಷ್ಟವಾದಾಗ, ಕೊರೊನಾ ಬಂದು ಆಸ್ಪತ್ರೆ, ವೆಂಟಿಲೇಟರ್, ಬೆಡ್ ಸಿಗದೆ ಜನರು ಹಾದಿ ಬೀದಿಯಲ್ಲಿ ಪ್ರಾಣ ಬಿಡುವಾಗ ರಾಜ್ಯಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ,ಪಿ ನಡ್ಡಾ ಅವರು ಈಗ ಚುನಾವಣೆ ಇರುವ ಕಾರಣಕ್ಕೆ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದಾರೆ, ಇಲ್ಲಿ ಬಂದು ನಮ್ಮ ಸರ್ಕಾರದ ಯೋಜನೆಗಳನ್ನು ಉದ್ಘಾಟಿಸಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಲೋಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬರಬೇಡಿ ಎಂದು ಹೇಳಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 3 ವರ್ಷ ಪ್ರವಾಹ ಬಂದಿತ್ತು, ಅವರು ಇಲ್ಲಿಗೆ ಬಂದು ಜನರ ಕಷ್ಟ ಸುಖ ಕೇಳಿದ್ರಾ? ಕೊರೊನಾ ರೋಗ ಬಂದು ಆಮ್ಲಜನಕ ಸಿಗದೆ ಬಹಳಷ್ಟು ಜನ ಸತ್ತು ಹೋದರು, ಕರ್ನಾಟಕ್ಕೆ ನೀಡುತ್ತಿದ್ದ ಆಮ್ಲಜನಕವನ್ನು ಕಸಿದುಕೊಂಡು ಬೇರೆಕಡೆಗೆ ಕೊಡಲು ಹೊರಟಿದ್ದರು, ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದ್ದರಿಂದ ನಮಗೆ ಆಮ್ಲಜನಕ ಸಿಕ್ಕಿತ್ತು. ಆಮ್ಲಜನಕ ಕೊರತೆಯಿಂದ ಚಾಮರಾಜನಗರದಲ್ಲಿ 36 ಜನ ಸಾವಿಗೀಡಾದರು, ಅಲ್ಲಿಗೆ ಬಂದು ಆರೋಗ್ಯ ಸಚಿವ ಸುಧಾಕರ್ ಮತ್ತು ಉಸ್ತುವಾರಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು 3 ಜನ ಮಾತ್ರ ಸತ್ತಿದ್ದು ಎಂದು ಸುಳ್ಳು ಹೇಳಿದ್ರು. ಮರುದಿನ ನಾನು ಮತ್ತು ಡಿ.ಕೆ ಶಿವಕುಮಾರ್ ಅವರು ಹೋಗಿ ವೈದ್ಯರ ಜೊತೆ ಚರ್ಚೆ ಮಾಡಿದ ಮೇಲೆ 36 ಸತ್ತಿದ್ದು ನಿಜ ಎಂದು ಒಪ್ಪಿಕೊಂಡರು. ಈ ದುರಂತ ಸಂಭವಿಸಿದಾಗ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಇವರಲ್ಲಿ ಯಾರೊಬ್ಬರೂ ಬರಲಿಲ್ಲ. ಈಗ ಮತ, ಅಧಿಕಾರಕ್ಕಾಗಿ ವಾರಕ್ಕೊಮ್ಮೆ ಬಂದು, ರೋಡ್ ಶೋ ಮಾಡುತ್ತಿದ್ದಾರೆ. ಜೊತೆಗೆ ನಾವು ಮಾಡಿದ್ದ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ.
ಮೈಸೂರು – ಬೆಂಗಳೂರು ರಸ್ತೆಗೆ ಅನುಮೋದನೆ ಸಿಕ್ಕಿದ್ದು 4 ಮಾರ್ಚ್ 2014ರಲ್ಲಿ. ಈ ಮೊದಲು ಅದು ರಾಜ್ಯ ಹೆದ್ದಾರಿಯಾಗಿತ್ತು. ನಾನು ಮತ್ತು ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಮಹದೇವಪ್ಪನವರು ಕೇಂದ್ರದ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿ, ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಮತ್ತು ದಶಪಥ ರಸ್ತೆಗೆ ಅನುಮೋದನೆ ಪಡೆದಿದ್ದೆವು. ಎಸ್,ಎಂ ಕೃಷ್ಣ ಅವರು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗ ದ್ವಿಪಥದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಮಾಡಲಾಗಿತ್ತು.
ಧಾರವಾಡದಲ್ಲಿ ಐಐಟಿ ಮಾಡಿದವರು ನಾವು, ಇದಕ್ಕೆ ಜಾಗ ನೀಡಿದ್ದು ನಾವು. ಶಂಕುಸ್ಥಾಪನೆ ಮಾಡಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ. ಇದರ ಉದ್ಘಾಟನೆಗೆ ನರೇಂದ್ರ ಮೋದಿ ಅವರು ಬಂದಿದ್ದಾರೆ.
ಸೇಡಂನಲ್ಲಿ ಬಂಜಾರ ಸಮುದಾಯದ ಜನರಿಗೆ ಹಕ್ಕು ಪತ್ರ ನೀಡಲು ಪ್ರಧಾನಿಗಳು ಬಂದಿದ್ದರು. ಈ ಜನರು ವಾಸ ಮಾಡುವ ಹಟ್ಟಿಗಳು, ಮಜರೆಗಳು, ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿದ್ದು ನಾವು. ಸರ್ಕಾರಿ, ಅರಣ್ಯ ಭೂಮಿಯಲ್ಲಿ ವಾಸ ಮಾಡುತ್ತಿದ್ದರು. 2016ರಲ್ಲಿ ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ಅವರಿಂದ ವರದಿ ಪಡೆದುಕೊಂಡು, ಹೀರಾನಾಯ್ಕ್ ಅವರನ್ನು ನೋಡಲ್ ಆಫೀಸರ್ ಆಗಿ ನೇಮಿಸಿ ಅವರಿಂದ ಯಾವ ರೀತಿ ವರದಿ ಜಾರಿ ಮಾಡಬೇಕು ಎಂಬ ಸ್ಪಷ್ಟ ಚಿತ್ರಣ ಪಡೆದುಕೊಂಡು, ತಾಂಡಗಳನ್ನು, ಮಜರೆಗಳನ್ನು, ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲು ಅರಣ್ಯ ಕಾಯ್ದೆಯ ಕಾನೂನು ತಿದ್ದುಪಡಿ ಮಾಡಿದ್ದು ನಾವು. ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ದೇವರಾಜ ಅರಸು ಅವರು ಉಳುವವನೆ ಭೂಮಿಯ ಒಡೆಯ ಎಂದು ಹೇಗೆ ಮಾಡಿದ್ದರೋ ಹಾಗೆಯೇ ವಾಸಿಸುವವನೆ ಮನೆಯೊಡೆಯ ಎಂದು ಮಾಡಿದ್ದು ನಾವು. ಇವರಿಗೆ ಹಕ್ಕು ಪತ್ರ ನೀಡಲು ಮೋದಿ ಅವರನ್ನು ಕರೆದುಕೊಂಡು ಬಂದಿದ್ದಾರೆ. ಪ್ರವಾಹ ಬಂದು ಮನೆ ಕಳೆದುಕೊಂಡರು, ಆಸ್ತಿಪಾಸ್ತಿ ನೀರುಪಾಲಾಯಿತು, ಜನರು ಪ್ರಾಣ ಕಳೆದುಕೊಂಡರು ಆಗ ಮೋದಿ ಅವರು ರಾಜ್ಯಕ್ಕೆ ಬರಲಿಲ್ಲ. ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಯಿತು, 3 ಲಕ್ಷ ಮನೆಗಳು ನಾಶವಾಯಿತು, ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದ್ರು, ಮೊದಲ ಕಂತು ಕೊಟ್ಟು ಉಳಿದದ್ದು ಕೊಟ್ಟಿಲ್ಲ. ಆಗ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಯಾರು ಬರಲಿಲ್ಲ. ಈಗ ಮೇಲಿಂದ ಮೇಲೆ ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ.
ನ ಖಾವೂಂಗ, ನ ಖಾನೇದೂಂಗ ಎನ್ನುವ ನರೇಂದ್ರ ಮೋದಿ ಅವರು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರ ಪತ್ರದ ಬಗ್ಗೆ ಕನಿಷ್ಠಪಕ್ಷ ಒಂದು ವಿವರಣೆಯನ್ನಾದರೂ ರಾಜ್ಯ ಸರ್ಕಾರದಿಂದ ಕೇಳಬೇಕಿತ್ತು. ರುಪ್ಸಾದವರು ಪತ್ರ ಬರೆದರೂ ಅದಕ್ಕೆ ಯಾವ ಕ್ರಮ ಕೈಗೊಂಡಿಲ್ಲ. ಮಠಕ್ಕೆ ನೀಡುವ ಅನುದಾನ ಪಡೆಯಲು ಲಂಚ ನೀಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಅವರು ಆರೋಪ ಮಾಡಿದ್ದರು. ಆಗಲೂ ಸುಮ್ಮನಿದ್ದರು.
ಎಡಿಜಿಪಿ ಅಮೃತ್ ಪೌಲ್ ಪಿಎಸ್‌ಐ ನೇಮಕಾತಿಯಲ್ಲಿ ಜೈಲಿಗೆ ಹೋದರು, ಒಬ್ಬರು ಡಿ.ಸಿ ಜೈಲು ಸೇರಿದ್ರು, ಇವರ ಜೊತೆ 70 ಜನ ಬಂಧನಕ್ಕೊಳಗಾದರು. ಇವರೆಲ್ಲ ಸುಮ್ಮನೆ ಜೈಲು ಸೇರಿದ್ರಾ? ನನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡ, ನಂದೀಶ್ ಎಂಬ ಇನ್ಸ್‌ಪೆಕ್ಟರ್ ಸತ್ತು ಹೋದರು, ಅವರ ಶವ ನೋಡಲು ಹೋಗಿದ್ದ ಸಚಿವ ಎಂಟಿಬಿ ನಾಗರಾಜ್ ಅವರು 70-80 ಲಕ್ಷ ಲಂಚ ಕೊಟ್ಟು ವರ್ಗಾವಣೆ ಮಾಡಿಕೊಂಡು ಬಂದಿದ್ದ, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು 2000 ಕೋಟಿ, ಮಂತ್ರಿಯಾಗಲು 200 ಕೋಟಿ ಹಣ ಕೊಡಬೇಕು ಎಂದು ಯತ್ನಾಳ್ ಹೇಳಿದ್ದಾರೆ, 21,000 ಕೋಟಿ ಕಾಮಗಾರಿಯಲ್ಲಿ 10% ಲಂಚವನ್ನು ತಿನ್ನುತ್ತಿದ್ದಾರೆ ಎಂದು ಬಿಜೆಪಿಯ ಪರಿಷತ್ ಸದಸ್ಯ ಹೆಚ್, ವಿಶ್ವನಾಥ್ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಇಷ್ಟಾದರೂ ಬೊಮ್ಮಾಯಿ ಅವರು ದಾಖಲಾತಿ ಕೊಡಿ ಎನ್ನುತ್ತಾರೆ.
ಇತ್ತೀಚೆಗೆ ಚನ್ನಗಿರಿಯ ಶಾಸಕ, ಸೋಪ್ ಎಂಡ್ ಡಿಟರ್ಜೆಂಟ್ ನ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ 40 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾನೆ. ಒಬ್ಬ ನಿಗಮ ಮಂಡಳಿಯ ಅಧ್ಯಕ್ಷನ ಮಗನ ಮನೆಯಲ್ಲಿ 8 ಕೋಟಿ ಲಂಚದ ಹಣ ಸಿಕ್ಕಿದ್ದರೆ ಇನ್ನು ಮಂತ್ರಿಗಳ ಮನೆಯಲ್ಲಿ ಎಷ್ಟು ಸಿಗಬಹುದು? ಮುಖ್ಯಮಂತ್ರಿ ಮನೆಯಲ್ಲಿ ಎಷ್ಟು ಸಿಗಬಹುದು? ಈ ಸರ್ಕಾರ ಅವನನ್ನು ರಕ್ಷಣೆ ಮಾಡಿದೆ. ಮಗ ಸಿಕ್ಕಿಬಿದ್ದ ರಾತ್ರಿಯೇ ಶಾಸಕರ ಮನೆಯ ಮೇಲೆ ರೇಡ್ ಮಾಡಿದ್ರೆ ಕೋಟಿಗಟ್ಟಲೆ ಹಣ ಸಿಗುತ್ತಿತ್ತು. ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರೆ, ನಾನು ಮನೆಯಲ್ಲೇ ಇದ್ದೆ ಎಂದು ವಿರೂಪಾಕ್ಷಪ್ಪ ಹೇಳುತ್ತಾರೆ. ಅವರನ್ನು ಬಂಧಿಸಬೇಡಿ ಎಂದು ಬಸವರಾಜ ಬೊಮ್ಮಾಯಿ ಅವರೇ ಪೊಲೀಸರಿಗೆ ಹೇಳಿದ್ದಾರೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ಮೇಲೆ ಅದಕ್ಕಿಂತ ಬೇರೆ ಯಾವ ಸಾಕ್ಷಿಯೂ ಇಲ್ಲ. ಹೀಗಾಗಿ ದಾಖಲಾತಿ ಕೇಳುತ್ತಿದ್ದ ಬೊಮ್ಮಾಯಿ ತಮ್ಮ ಹುದ್ದೆಯಲ್ಲಿ ಮುಂದುವರೆಯಬಹುದಾ? ಈ ಸರ್ಕಾರ ಕೋಟಿಗಟ್ಟಲೆ ಹಣ ಲೂಟಿ ಮಾಡಿದೆ. ಒಂದು ಕಡೆ ಪ್ರಧಾನಿಗಳು ಇವರಿಗೆ ರಕ್ಷಣೆ ಕೊಡುತ್ತಿದ್ದಾರೆ, ಮುಖ್ಯಮಂತ್ರಿಗಳು ಲಂಚ ಪಡೆಯುವಾಗ ಸಿಕ್ಕಿಬಿದ್ದವರಿಗೆ ರಕ್ಷಣೆ ನೀಡುತ್ತಾರೆ. ಇದು 40% ಕಮಿಷನ್ ಸರ್ಕಾರ ಎಂದು ಎಲ್ಲಾ ಕಡೆ ಜಗಜ್ಜಾಹೀರಾಗಿದೆ.