ಪ್ರಜಾಧ್ವನಿ ಯಾತ್ರೆ ಇಂದು ಹಾಸನದಲ್ಲಿ ಸಂಚರಿಸುತ್ತಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರಜಾಧ್ವನಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಬೇಲೂರು ಜನತೆಯನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು ನಂಬಿಕೆಗಿಂತ ದೊಡ್ಡ ಗುಣ ಬೇರೊಂದಿಲ್ಲ ಎಂದು ಸರ್ವಜ್ಞ ಹೇಳಿದ್ದಾರೆ. ಹೀಗಾಗಿ ಬೇಲೂರು ಕ್ಷೇತ್ರದಲ್ಲಿ ಯಾವುದೇ ಪರಿಸ್ಥಿತಿ ಇದ್ದರೂ ಇಲ್ಲಿನ ಜನ ಕಾಂಗ್ರೆಸ್ ಅಭ್ಯರ್ಥಿಯನ್ನೇ ಗೆಲ್ಲಿಸಲಿದ್ದಾರೆ ಎಂಬ ನಂಬಿಕೆ ಮೇಲೆ ನಾನು ಹಾಗೂ ನಮ್ಮ ಪಕ್ಷದ ನಾಯಕರು ಇಲ್ಲಿಗೆ ಬಂದಿದ್ದೇವೆ ಎಂದರು.
ದಿವಂಗತ ಹಿರಿಯ ನಾಯಕ ರುದ್ರೇಶ್ ಗೌಡರನ್ನು ನೆನೆದ ಡಿಕೆ ಶಿವಕುಮಾರ್ ಅವರು, ನನ್ನ ಮಿತ್ರ ರುದ್ರೇಶ್ ಗೌಡರು ಸರಳ ಸಜ್ಜನಿಕೆ ಶಾಸಕರಾಗಿ ಜನಪರ ಕೆಲಸ ಮಾಡಿದ್ದಾರೆ. ಅವರ ಆರೋಗ್ಯ ಸರಿಯಿಲ್ಲದಿದ್ದರೂ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಆಪರೇಷನ್ ಕಮಲದಲ್ಲಿ ಸೆಳೆಯಲು ಬಿಜೆಪಿ ಹಾಗೂ ಯಡಿಯೂರಪ್ಪನವರು ಎಷ್ಟೇ ಪ್ರಯತ್ನಿಸಿದರೂ ರುದ್ರೇಶ್ ಅವರು ಅದಕ್ಕೆ ಬಲಿಯಾಗಲಿಲ್ಲ. ಅವರು ಕೊಡುಗೈ ದಾನಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಹಾಗೂ ಸ್ವಾಭಿಮಾನ ಕಾಪಾಡಿಕೊಂಡವರು. ಇಂದು ಅವರು ನಮ್ಮ ಜತೆ ಇಲ್ಲ. ಅವರ ಸ್ನೇಹವನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದರು.

ಮುಂದುವರೆದು ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಾವು ಉತ್ತಮ ಕೆಲಸ ಮಾಡಿದರೂ ಕಳೆದ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ನಾವು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡಿದೆವು. ಆದರೆ ಅವರು ತಮಗೆ ಸಿಕ್ಕ ಅಧಿಕಾರ ಉಳಿಸಿಕೊಳ್ಳಲಿಲ್ಲ. ಯೋಗ ಇದ್ದರೂ ಯೋಗಕ್ಷೇಮ ಕಾಪಾಡಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಈಗ ಮತ್ತೆ ಪರೀಕ್ಷೆಗೆ ನಿಮ್ಮ ಮುಂದೆ ನಿಂತಿದ್ದೇವೆ. ನಾವು ಜನರ ಪರವಾಗಿ ನಿಂತು ಹೋರಾಟ ಮಾಡಿದ್ದೇವೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿಂದ ಏನಾದರೂ ಬದಲಾವಣೆ ತಂದಿದ್ದಾರಾ? ಇದೇ ಕಾರಣಕ್ಕೆ ಸಾವಿರಾರು ಮಂದಿ ಕಾರ್ಯಕರ್ತರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಅವರು ನಿಮ್ಮ ಬದುಕಿನಲ್ಲಿ ಬಲಾವಣೆ ತಂದರಾ? ರೈತರ ಆದಾಯ ಡಬಲ್ ಮಾಡುತ್ತೇವೆ, ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ, ನಿಮಗೆ ಅಚ್ಛೇ ದಿನ ಕೊಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ಈ ಭರವಸೆಗಳಲ್ಲಿ ಯಾವುದಾದರೂ ಒಂದು ಭರವಸೆ ಈಡೇರಿಸಿದರಾ? ಯಾವುದೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಇಂಧನ ಸಚಿವನಾಗಿದ್ದಾಗ 25 ಸಾವಿರ ಜನರಿಗೆ ಕೆಲಸ ಕೊಟ್ಟೆ. ಯಾವುದೇ ಒಬ್ಬ ವ್ಯಕ್ತಿ ಶಿವಕುಮಾರ್ ಗೆ ಲಂಚ ನೀಡಿ ಕೆಲಸ ಪಡೆದೆ ಎಂದು ಆರೋಪ ಮಾಡಿಲ್ಲ. ಅಷ್ಟು ಪಾರದರ್ಶಕತೆ ಕಾಪಾಡಿಕೊಂಡು ಕೆಲಸ ಮಾಡಿದ್ದೆವು. 545 ಪಿಎಸ್ಐ ಹುದ್ದೆಗೆ 50 ಸಾವಿರ ಆಕಾಂಕ್ಷಿಗಳು ಅರ್ಜಿ ಹಾಕಿದ್ದರು. ಐಪಿಎಸ್ ಅಧಿಕಾರಿಗಳಿಂದ ಸರ್ಕಾರದ ಮಂತ್ರಿಗಳು ಭಾಗಿಯಾಗಿ ಈ ನೇಮಕಾತಿಯಲ್ಲಿ ಅಕ್ರಮ ಮಾಡಿದ್ದಾರೆ. ಪರಿಣಾಮ ಐಪಿಎಸ್ ಅಧಿಕಾರಿ ಜೈಲು ಸೇರಿದ್ದಾರೆ. ಇದು ಬಿಜೆಪಿ ಸಾಧನೆ.
ಮಹಿಳೆಯರಿಗೆ ಬಿಜೆಪಿ ಅನೇಕ ಆಶ್ವಾಸನೆ ನೀಡಿತ್ತು. ಆದ್ಯಾವುದೂ ಈಡೇರಲಿಲ್ಲ. ಬದಲಿಗೆ ಬೆಲೆ ಏರಿಕೆಯಿಂದ ಮಹಿಳೆಯರು ಮನೆ ನಡೆಸುವುದೇ ಕಷ್ಟವಾಗಿದೆ. ಇದಕ್ಕೆ ಪರಿಹಾರ ನೀಡಲು ಕಾಂಗ್ರೆಸ್ ಪಕ್ಷ 3 ಗ್ಯಾರಂಟಿ ಯೋಜನೆ ಪ್ರಕಟಿಸಿದೆ. ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಇದರಿಂದ ಪ್ರತಿ ತಿಂಗಳು 1500 ರೂ. ಉಳಿತಾಯವಾಗುತ್ತದೆ. ಇನ್ನು ಮಹಿಳೆಯರಿಗೆ ಬೆಲೆ ಏರಿಕೆ ಸಮಸ್ಯೆಯಿಂದ ಪರಿಹಾರ ನೀಡಲು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎರಡು ಯೋಜನೆ ಮೂಲಕ ವರ್ಷಕ್ಕೆ 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷದಷ್ಟು ಆರ್ಥಿಕ ಶಕ್ತಿ ತುಂಬಲಾಗುವುದು. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ ನೀಡಲಾಗುವುದು. ನಾವು ಈ ಯೋಜನೆ ಜಾರಿ ಮಾಡದಿದ್ದರೆ ನಾವು ಮತ್ತೆ ನಿಮ್ಮ ಮುಂದೆ ಬಂದು ಮತ ಕೇಳುವುದಿಲ್ಲ. ಬಿಜೆಪಿ, ದಳದವರು ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ನೀಡಿದ್ದಾರಾ? ಈ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸಹಿ ಹಾಕಿಸಿ ಗ್ಯಾರಂಟಿ ಕಾರ್ಡ್ ನೀಡಲಾಗುವುದು. ನೀವು ಮನೆ ಮನೆಗೆ ಈ ಕಾರ್ಡ್ ತಲುಪಿಸಬೇಕು. ಬಿಜೆಪಿ ಸರ್ಕಾರ 600 ಭರವಸೆ ನೀಡಿದ್ದು, 550 ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ ಕೊಟ್ಟಿದೆ. ದುರ್ಬಲ ಸಮುದಾಯದ ಏಳಿಗೆಗೆ ಮೀಸಲಾತಿ ಕೊಟ್ಟಿದೆ. ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದಾರೆ. ಇತಿಹಾಸ ಮರೆತರೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು. ರೈತ ಕೊಡುವ ಅನ್ನ, ಗುರು ನೀಡುವ ವಿದ್ಯೆ, ಮತದಾರ ನೀಡುವ ತೀರ್ಪು ಇದಕ್ಕೆ ನಾವು ಋಣಿಯಾಗಿರಬೇಕು. ಈ ಮತದಾರರ ನಮಗೆ ಸಕ್ತಿ ನೀಡುತ್ತಾರೆ. ನಾವು ಅವರಿಗೆ ಋಣಿಯಾಗಿ ಅವರ ಪರವಾಗಿ ಕೆಲಸ ಮಾಡಬೇಕು.
ಅನೇಕರು ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಎಲ್ಲರಿಗೂ ಅಧಿಕಾರ, ಸೂಕ್ತ ಸ್ಥಾನಮಾನ ನೀಡಲಾಗುವುದು. ಹೀಗಾಗಿ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಕೆಲವರು ಸಿಳ್ಳು ಪ್ರಚಾರ ಮಾಡುತ್ತಾರೆ. ನೀವು ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿ ವ್ಯಕ್ತಿಪೂಜೆಗಿಂತ ಪಕ್ಷ ಪೂಜೆ ಮುಖ್ಯ. ಶಿವರಾಮ್ ಹಾಗೂ ನಾನು ಶಾಸಕರಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ಸಚಿವರಾಗಿದ್ದರು. ಈಗ ಅವರು ತಮ್ಮ ಕೊನೆ ಚುನಾವಣೆ ಎಂದು ಹೇಳುತ್ತಿದ್ದಾರೆ. ಅವರಿಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಎಂದು ಕೇಳಿದೆ. ಆದರೆ ಜನರ ಸೇವೆ ಮಾಡಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ರುದ್ರೇಶ್ ಗೌಡರ ಧರ್ಮಪತ್ನಿ ಅವರಿಗೆ ಇಷ್ಟವಿಲ್ಲದಿದ್ದರೂ ನಾವು ಬಲವಂತವಾಗಿ ಚುನಾವಣೆಗೆ ನಿಲ್ಲಿಸಿದೆವು. ಆಕೆ ಸೋಲನ್ನನುಭವಿಸಿದ್ದಾರೆ. ಆಕೆಗೆ ಮೋಸ ಆಗಿದೆ. ಪಕ್ಷಕ್ಕೆ ರಾಜಶೇಖರ್ ಅವರು ಸೇರಿದ್ದಾರೆ. ಅವರು ಪಕ್ಷ ಸೇರುವಾಗ ನನಗೆ ಟಿಕೆಟ್ ಮುಖ್ಯ ಅಲ್ಲ. ನಿಮ್ಮ ಜತೆ ಇದ್ದು ಪಕ್ಷದ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಇನ್ನು ಹಿಂದುಳಿದ ವರ್ಗದ ನಾಯಕರಾದ ಲಕ್ಷ್ಮಣ್ ಅವರು ಬಿಜೆಪಿಯಲ್ಲಿದ್ದರು. ಅವರನ್ನು ಪಕ್ಷಕ್ಕೆ ಕರೆತಂದಿದ್ದೇವೆ. ಹಾಸನದಲ್ಲಿ ಬಹಳ ಪ್ರಮುಖವಾಗಿ ಯುವ ನಾಯಕರನ್ನು ಮುಂದಿನ ದಿನಗಳಲ್ಲಿ ವಿಶೇಷವಾಗಿ ಗಮನಿಸುತ್ತೇವೆ. ಅವರಿಗೆ ಸೂಕ್ತ ಜವಾಬ್ದಾರಿ ನೀಡುತ್ತೇವೆ ಎಂದು ಭರವೆ ನೀಡಿದರು.
ಮೋದಿ ಅವರು ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಕೋವಿಡ್, ನೆರೆ ಪರಿಸ್ಥಿತಿ ಇದ್ದಾಗ ಬರಲಿಲ್ಲ. ಈಗ ಚುನಾವಣೆ ಬಂದಿದೆ ಎಂದು ಮೋದಿ, ನಡ್ಡಾ, ಅಮಿತ್ ಶಾ ವಾರಕ್ಕೊಮ್ಮೆ ಬರುತ್ತಿದ್ದಾರೆ. ಅವರು ಬಡವರ ಕಷ್ಟಕ್ಕೆ ಬರಲಿಲ್ಲ. ಕೇವಲ ಅಧಿಕಾರಕ್ಕಾಗಿ ಬರುತ್ತಿದ್ದಾರೆ. ನಮ್ಮ ಪಕ್ಷದ ನಾಯಕರು ಜನರ ಕಷ್ಟಕ್ಕೆ ನೆರವಾಗಿ ನಿಂತೆವು. ಈ ಭಾಗದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ಮಾಡಿದೆವು. ದಳದವರು ಕೋವಿಡ್ ಸಮಯದಲ್ಲಿ ಮನೆಯಲ್ಲಿ ಮಲಗಿದ್ದರು. ಚಾಮರಾಜನಗರದಲ್ಲಿ 36 ಜನ ಆಕ್ಸಿಜನ್ ಇಲ್ಲದೆ ಸತ್ತರು. ಸರ್ಕಾರ ಅವರನ್ನು ಕೊಲೆ ಮಾಡಿತು. ಆದರೂ ಅವರಿಗೆ ಸರ್ಕಾರ ಪರಿಹಾರ ನೀಡಲಿಲ್ಲ. ನಾನು ನಮ್ಮ ನಾಯಕರು ಹೋಗಿ 1 ಲಕ್ಷ ಪರಿಹಾರ ನೀಡಿ ಸಾಂತ್ವನ ತುಂಬಿದೆವು. ನಮ್ಮ ಸರ್ಕಾರ ಬಂದ ನಂತರ ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಈ 36 ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದೇವೆ.

ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ. ಇನ್ನು ಜೆಡಿಶ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಅವರಿಗೆ ಕೊಡಬೇಕಾದ ಅವಕಾಶ ಕೊಟ್ಟಿದ್ದೀರಿ. ಬಿಜೆಪಿ ಹಾಗೂ ದಳದವರು ಅದಿಕಾರ ಸಿಕ್ಕಾಗ ನಿಮ್ಮ ಬದುಕಲ್ಲಿ ಬದಲಾವಣೆ ತರಲು ಸಾಧ್ಯವಾಗಲಿಲ್ಲ. ನಾನು ನಿಮ್ಮ ಮನೆ ಮಗನಾಗಿದ್ದೇನೆ. 40 ವರ್ಷಗಳಿಂದ ಪರಿಶುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ನೀಡಿ, ಆಶೀರ್ವಾದ ಮಾಡಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯದಲ್ಲಿ ಭ್ರಷ್ಟ 40% ಕಮಿಷನ್ ಸರ್ಕಾರವಿದೆ. ಈ ರಾಜ್ಯವನ್ನು ಭ್ರಷ್ಟ ಸರ್ಕಾರದಿಂದ ಮುಕ್ತ ಮಾಡಬೇಕು. ಈ ಸರ್ಕಾರದಲ್ಲಿ ಯಾವುದೇ ಕೆಲಸ ಆಗಬೇಕಾದರೆ 40% ಕಮಿಷನ್ ನೀಡಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಮಠಾಧೀಶರು ಕೂಡ ಈ ಸರ್ಕಾರಕ್ಕೆ 30% ಕಮಿಷನ್ ನೀಡಬೇಕಾಗಿದೆ. ಈ ಭಾಗದ ಜನ ಮುನ್ಸಿಪಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಜಿಲ್ಲೆಗೆ ಶಕ್ತಿ ತುಂಬಿದ್ದೀರಿ. ಅದೇ ರೀತಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಕ್ಷೇತ್ರದ ಜನರಲ್ಲಿ ಮನವೆ ಮಾಡಿದರು.