ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (Yediyurappa) ಅವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿದ್ದು ಯಾಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನ ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತೋರಿದ ನಮ್ರತೆ ಇಷ್ಟು ದಿನ ಎಲ್ಲಿ ಹೋಗಿತ್ತು? ಅವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ ಎಂಬುದರ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Tanveer Sait: ಕಾಂಗ್ರೆಸ್‌ಗೆ ಶಾಕ್ : ಶಾಸಕ ತನ್ವೀರ್ ಸೇಠ್ ರಾಜಕೀಯ ನಿವೃತ್ತಿ
ನರೇಂದ್ರ ಮೋದಿ ಅವರು ದೇಶದ ಪ್ರಧಾನಿ. ಅವರನ್ನು ನಾವು ಗೌರವಿಸುತ್ತೇವೆ. ಆದರೆ, ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರಿಗೆ ಕೊಟ್ಟ ನೋವು, ವಿಧಾನಸೌಧದಿಂದ ರಾಜ್ಯಪಾಲರ ಮನೆವರೆಗೂ ಕಣ್ಣೀರು ಹಾಕಿಕೊಂಡು ಹೋಗಿ ರಾಜೀನಾಮೆ ನೀಡಿದ್ದರ ಬಗ್ಗೆ ಮೋದಿ ಅವರು ಮಾತನಾಡಬೇಕು ಎಂದು ತಿಳಿಸಿದ್ದಾರೆ.
ಇ.ಡಿ ದಾಳಿ ನೋಟಿಸ್ ಬಗ್ಗೆ ವಿವರಣೆ ನೀಡಿ

ಯಡಿಯೂರಪ್ಪ, ಅವರ ಕುಟುಂಬ ಸದಸ್ಯರು, ಆಪ್ತರ ಮೇಲೆ ಇಡಿ ದಾಳಿ ನೋಟೀಸ್ ನೀಡಿರುವ ಬಗ್ಗೆ, ಅವರನ್ನು ತನಿಖಾಧಿಕಾರಿಗಳು ಎಷ್ಟು ಬಾರಿ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಮೋದಿ ಅವರು ವಿವರಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಆಪರೇಷನ್ ಕಮಲಕ್ಕೆ ಬಿಎಸ್‌ವೈ ಬೇಕಿತ್ತಾ?
ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ನಡೆಸಿ 104 ಸೀಟು ಪಡೆದ ನಂತರ ಅಧಿಕಾರದಿಂದ ಯಾಕೆ ಇಳಿಸಿದರು. ಚುನಾವಣೆ ಮಾಡಲು ಅವರು ಬೇಕಾಗಿತ್ತು. ಆಪರೇಷನ್ ಕಮಲ ಮಾಡಲು ಅವರು ಬೇಕಾಗಿತ್ತು. ಆದರೆ ಅಧಿಕಾರವನ್ನು ಯಾಕೆ ಕಸಿದುಕೊಂಡರು? ಅವರನ್ನು ನಾಯಕತ್ವದಿಂದ ತೆಗೆದ ನಂತರ ಪಕ್ಷಕ್ಕೆ ಅಭದ್ರತೆ ಎದುರಾಗಿದೆ ಎಂದು ಹೇಳಿದ್ದಾರೆ.
ಬೊಮ್ಮಾಯಿ ಅವರನ್ನು ಕೆಳಗಿಳಿಸಿ ಬಿಎಸ್‌ವೈಗೆ ಅಧಿಕಾರ ಕೊಡಿ
ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂದು ಅಧಿಕೃತವಾಗಿ ಘೋಷಿಸಿ, ಅವರಿಗೆ ಜವಾಬ್ದಾರಿ ನೀಡಲಿ. ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಲಿ. ಆಗ ಅವರ ನಮ್ರತೆಯನ್ನು ಜನ ನಂಬುತ್ತಾರೆ. ಅದನ್ನು ಬಿಟ್ಟು ರಾಜಕಾರಣದಲ್ಲಿ ನಾಟಕೀಯ ಸಿಂಪತಿಯನ್ನು ಜನ ಒಪ್ಪುವುದಿಲ್ಲ ಎಂದು ಕುಟುಕಿದ್ದಾರೆ.
ರಾಷ್ಟ್ರೀಯ ನಾಯಕರಿಂದ ರಾಜ್ಯ ಪ್ರವಾಸ
ಕಾಂಗ್ರೆಸ್ ರಾಷ್ಟ್ರೀಯ ನಾಯಕರು ರಾಜ್ಯ ಪ್ರವಾಸ ಯಾವಾಗ ಮಾಡುತ್ತಾರೆ ಎಂದು ಕೇಳಿದ ಪ್ರಶ್ನೆಗೆ, ಸಮಯ ಬಂದಾಗ ಅವರು ಬರುತ್ತಾರೆ. ಯಾರು ಯಾವಾಗ ಬರಬೇಕು ಎಂದು ತೀರ್ಮಾನಿಸಿದ ನಂತರ ಬರುತ್ತಾರೆ. ನಾವು ನಮ್ಮದೇ ಆದ ರೀತಿಯಲ್ಲಿ ಅವರನ್ನು ಕರೆಸಿ ಪ್ರಚಾರ ಸಭೆ ಮಾಡಿಸುತ್ತೇವೆ. ಅನೇಕ ಮಾಜಿ ಮಂತ್ರಿಗಳು, ಕೇಂದ್ರ ನಾಯಕರು ಪ್ರತಿ ಜಿಲ್ಲೆಗೂ ಬಂದು ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.