ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾರತ್ ಜೋಡೋ ಯಾತ್ರೆಯ (Bharat Jodo Yatra) ಅಭೂತಪೂರ್ವ ಯಶಸ್ಸಿನ ಮೂಲಕ ದೇಶದ ಜನರ ಮನಸ್ಸು ಗೆದ್ದಿದ್ದಾರೆ. ಈ ಯಶಸ್ಸಿನ ಬಳಿಕ ರಾಹುಲ್ ಗಾಂಧಿ(Rahul Gandhi), ಇಟಾಲಿಯನ್ ದಿನಪತ್ರಿಕೆ ‘ಕೊರಿಯರ್ ಡೆಲ್ಲಾ ಸೆರಾ’ಗೆ ಸಂದರ್ಶನ ನೀಡಿದ್ದು ಅದರಲ್ಲಿ ಬಾಲ್ಯ, ಮದುವೆ ಸೇರಿದಂತೆ ಇಂದಿರಾ ಗಾಂಧಿ ಅವರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಪಕ್ಷ ಹಾಗೂ ರಾಹುಲ್ ಗಾಂಧಿಗೆ ಲಾಭ ಅಥವಾ ನಷ್ಟ ಆಗಬಹುದು. ಆದರೆ, ದೇಶದಾದ್ಯಂತ ರಾಹುಲ್ ಗಾಂಧಿ ಅವರ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿರುವುದನ್ನು ಕಾಣಬಹುದು. ಭಾರತ್ ಜೋಡೋ ಸಮಯದಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದ ರಾಹುಲ್ ಗಾಂಧಿ ಅವರು ಇದೀಗ ಸಂದರ್ಶನದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ದೇಶದ ಅಭಿವೃದ್ಧಿಯ ಕನಸು, ಭಾರತ್ ಜೋಡೋ ಯಾತ್ರೆ ಉದ್ದೇಶ, ಬಾಲ್ಯದ ದಿನಗಳು ವಿವಾಹ ಸೇರಿದಂತೆ ಪ್ರಸ್ತುತ ಆಡಳಿತದಲ್ಲಿರುವ ಪಕ್ಷದ ಕಾರ್ಯವೈಖರಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಎದುರಿಸಿ, ತಮ್ಮದೇ ಆದ ಶೈಲಿಯಲ್ಲಿ ಉತ್ತರಿಸಿದ್ದಾರೆ.
ಇಂದಿರಾ ಅಜ್ಜಿಗೆ ನಾನು ನೆಚ್ಚಿನವನಾಗಿದ್ದೆ
ರಾಹುಲ್ ಗಾಂಧಿ ಅವರು ತಮ್ಮ ಅಜ್ಜಿ ಇಂದಿರಾ ಗಾಂಧಿ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾನು ನನ್ನ ಭಾರತೀಯ ಅಜ್ಜಿ ಇಂದಿರಾ ಗಾಂಧಿಯವರಿಗೆ ನೆಚ್ಚಿನವನಾಗಿದ್ದೆ. ನನ್ನ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಟಾಲಿಯನ್ ಅಜ್ಜಿ ಪಾವೊಲಾ ಮೈನೊಗೆ ಅಚ್ಚುಮೆಚ್ಚಿನವಳಾಗಿದ್ದಳು ಎಂದು ಹೇಳಿದ್ದಾರೆ. ಅಜ್ಜಿ ಪಾವೊಲಾ ಮೈನೊ ಸುಮಾರು 98 ವರ್ಷ ಬದುಕಿದ್ದರು. ನಾನು ನನ್ನ ಚಿಕ್ಕಪ್ಪ ವಾಲ್ಟರ್, ಸೋದರ ಸಂಬಂಧಿಗಳು ಮತ್ತು ಇಡೀ ಕುಟುಂಬವನ್ನು ತುಂಬಾ ಭಾವನಾತ್ಮಕವಾಗಿ ಹಚ್ಚಿಕೊಂಡಿದ್ದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮದುವೆ ಬಗ್ಗ ಮೌನ ಮುರಿದ ರಾಹುಲ್

ಇನ್ನೂ ಸಂದರ್ಶನದ ವೇಳೆ ರಾಹುಲ್ ಗಾಂಧಿ ಅವರಿಗೆ ‘ನಿಮಗೆ ಇಷ್ಟು ವರ್ಷವಾದರೂ ಯಾಕೆ ಮದುವೆ ಆಗಿಲ್ಲ?’ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ನನಗೂ ಇದು ವಿಚಿತ್ರ ಅಂತಾ ಅನಿಸುತ್ತಿದೆ. ಯಾಕೆ ಅಂತ ಗೊತ್ತಿಲ್ಲ ನನಗೆ. ಆದರೆ, ನಾನು ಮಾಡಲು ತುಂಬಾ ಕೆಲಸಗಳಿವೆ. ಆದರೆ, ನಾನು ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದು ಉತ್ತರಿಸಿದ್ದಾರೆ.
ಗಡ್ಡವನ್ನು ಕತ್ತರಿಸಬಾರದು ಎಂಬ ನಿರ್ಧಾರ
ಭಾರತ್ ಜೋಡೋ ವೇಳೆ ಯಾಕೆ ಗಡ್ಡವನ್ನು ಬೆಳೆಸಿದ್ದೀರಿ ಎಂಬ ಪ್ರಶ್ನೆಗೂ ರಾಹುಲ್ ಉತ್ತರಿಸಿದ್ದಾರೆ. ನಾನು ಇಡೀ ಭಾರತ್ ಜೋಡೋ ಯಾತ್ರೆಯುದ್ದಕ್ಕೂ ಗಡ್ಡವನ್ನು ಕತ್ತರಿಸಬಾರದು ಎಂಬ ನಿರ್ಧಾರ ಮಾಡಿದ್ದೆ. ಗಡ್ಡಕ್ಕೆ ಒಮ್ಮೆಯೂ ಕತ್ತರಿ ಹಾಕದ ಕಾರಣ ಅದು ಇಷ್ಟು ಉದ್ದಕ್ಕೆ ಬೆಳೆದಿದೆ. ಈಗ ಅದನ್ನು ಉಳಿಸಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆಯೂ ನಾನು ನಿರ್ಧಾರ ಮಾಡಬೇಕಿದೆ ಎಂದು ಹೇಳಿದ್ದಾರೆ.

ಫ್ಯಾಸಿಸಂ ದೇಶವನ್ನು ಪ್ರವೇಶಿಸಿದೆ.
ದೇಶದ ರಾಜಕೀಯ ವ್ಯವಸ್ಥೆ ಬಗ್ಗೆ ರಾಹುಲ್ ಗಾಂಧಿ ಮುಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಫ್ಯಾಸಿಸಂ ದೇಶವನ್ನು ಪ್ರವೇಶಿಸಿದೆ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದೆ. ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪ್ರತಿಪಕ್ಷಗಳು ಫ್ಯಾಸಿಸಂಗೆ ಪರ್ಯಾಯ ದೃಷ್ಟಿಕೋನವನ್ನು ಮಂಡಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರಾಭವಗೊಳಿಸಬಹುದು ಎಂದು ತಿಳಿಸಿದ್ದಾರೆ.
ನನ್ನನ್ನು ಮಾತನಾಡೋಕೆ ಬಿಟ್ಟಿಲ್ಲ..!
ಸಂಸತ್‌ನಲ್ಲಿ ನನ್ನನ್ನು ಎರಡು ವರ್ಷಗಳಿಂದ ಮಾತನಾಡಲು ಬಿಟ್ಟಿಲ್ಲ. ನಾನು ಮಾತನಾಡಿದ ತಕ್ಷಣ ಅವರು ನನ್ನ ಮೈಕ್ರೊಫೋನ್ ಅನ್ನು ತೆಗೆದುಹಾಕುತ್ತಾರೆ. ಅಧಿಕಾರವನ್ನು ಸಮತೋಲನದಿಂದ ನಡೆಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.