ಬೇಲೂರು/ ಅರೇಹಳ್ಳಿ (ಜ.27): ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ಬಡವರ ಬಂಧು , ಕ್ರಿಯಾಶೀಲ ವ್ಯಕ್ತಿ ಅರೇಹಳ್ಳಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ , ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ.ಮಮತ ಅವರಿಗೆ ದೇಶ ಭಕ್ತರ ಬಳಗವತಿಯಿಂದ ೭೪ ನೇ ಗಣರಾಜ್ಯೋತ್ಸವದ ಪ್ರಯುಕ್ತ ೨೦೨೨ ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದ ದೇಶ ಭಕ್ತರ ಬಳಗದ ಅಧ್ಯಕ್ಷ ಡಾ. ಸಂತೋಷ್ ಕುಮಾರ್, ವೈದ್ಯೋ ನಾರಾಯಣ ಹರಿ” ಎಂಬಂತೆ ದೇವರ ರೂಪದಲ್ಲಿ ಧರೆಯ ಮೇಲೆ ನಾಡಿನ ಜನತೆಯ ಸೇವೆಗೈಯುತ್ತಿರುವ ನಾಡಿನ ಸಮಸ್ತ ವೈದ್ಯರ ಸೇವೆ ಅನನ್ಯವಾದುದು. ಶಸ್ತ್ರಚಿಕಿತ್ಸೆ ,ಬಂಜೆತನ ನಿವಾರಣಾ ಶಿಬಿರ , ತಂದೆಯ ಜನುಮದಿನದ ಪ್ರಯುಕ್ತ ಆರೋಗ್ಯ ಶಿಬಿರ, ತಾಯಿಯ ಜನ್ಮದಿನದ ಪ್ರಯುಕ್ತ ಗರ್ಭಿಣಿಯರಿಗೆ ಸೀಮಂತ ಸಮಾರಂಭ, ಮಹಿಳಾ ದಿನಾಚರಣೆಯಂದು ರಕ್ತದಾನ ಶಿಬಿರ , ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವಿಕೆ , ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ, ಶಾಲಾ ಮಕ್ಕಳಿಗೆ ಪ್ರಥಮ ಚಿಕಿತ್ಸಾ ವಿತರಣೆ, ಆಸ್ಪತ್ರೆಯಲ್ಲಿ ಗ್ರಂಥಾಲಯದ ಸ್ಥಾಪನೆ ಹೀಗೆ ಅನೇಕ ಸಾರ್ವಜನಿಕ ಸೇವೆಯನ್ನು ಕೈಗೊಂಡ , ಅತ್ಯುತ್ತಮವಾಗಿ ನಿಸ್ವಾರ್ಥ ಮನೋಭಾವದಿಂದ ಗ್ರಾಮೀಣ ಜನರಿಗೆ ಸೇವೆಯನ್ನು ಒದಗಿಸುತ್ತಿರುವ ಡಾ.ಮಮತ ಅವರ ಸೇವೆ ಅಭಿನಂದನಾರ್ಹವಾದದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೈದ್ಯಾಧಿಕಾರಿ ಡಾ.ಮಮತಾ ಜೀವನದಲ್ಲಿ ಏನಾದರೂ ಗುರಿ ಇಟ್ಟುಕೊಂಡು ಮುಂದುವರೆಯಬೇಕಿದೆ . ಕಷ್ಟಗಳಲ್ಲಿಯೂ ಸಹ ವೈದ್ಯಕೀಯ ಸಿಬ್ಬಂದಿಗಳು ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಇಲ್ಲಿನ ಅಭಿವೃದ್ಧಿಗೆ ಹಗಲು ಇರಳು ಶ್ರಮಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳು ಎಂದು ಹೇಳಿದರು.. ಯುವ ಸಾಹಿತಿ ನಿರಂಜನ್ ಎ.ಸಿ ಬೇಲೂರು ರವರು ಪ್ರಾಸ್ತಾವಿಕ ನುಡಿಯನ್ನಾಡಿದರು. ಕಾರ್ಯಕ್ರಮದಲ್ಲಿ ದೇಶ ಭಕ್ತರ ಬಳಗದ ಖಜಾಂಚಿ ಪ್ರಕಾಶ್ , ವೈದ್ಯೆ ಡಾ ಅನುಪಮ , ಡಾ. ಸುಶ್ರುತ ಸ.ಮು.ಆ.ಕೇಂದ್ರದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.