ಬೆಂಗಳೂರು (ಜ.26) :ಭಾರತದಲ್ಲಿ ಶೇ.6ರಷ್ಟು ಜನ ವಿಶೇಷ ಚೇತನರು (ವಿಕಲಾಂಗರು) ಇದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಕೇವಲ ಪ್ರತಿಶತ 1ರಷ್ಟು ಜನರು ಅನೌಪಚಾರಿಕ ಉದ್ಯೋಗವನ್ನು ಅವಲಂಬಿಸಿದ್ದಾರೆ ಎಂದು ದಿವ್ಯಾ ಎಸ್ ಹೊಸೂರ್ ಅವರು ತಿಳಿಸಿದ್ದಾರೆ. ಬೆಂಗಳೂರಿನ ಸೆಂಟ್ ಜೋಸೆಫ್ ಸಂಜೆ ಕಾಲೇಜಿನಲ್ಲಿ ಎಪಿಡಿ (APD) ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ (ಜಿಲ್ಲೆಗಳಲ್ಲಿ) ಅಂಗವಿಕಲರಿಗೆ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸಲು, ಉತ್ತೇಜಿಸಲು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ನಾವು ಅವರ ಸಮಸ್ಯೆಗಳು, ಕಾರ್ಯತಂತ್ರ, ಆದ್ಯತೆ ಹಾಗೂ ಗುರಿಗಳನ್ನು ಪರಿಗಣಿಸಿದ್ದೇವೆ. ಇದರಲ್ಲಿ ವಿಕಲಾಂಗರ ಭಾಗವಹಿಸುವಿಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ವೈವಿಧ್ಯತೆ ಹಾಗೂ ಹೊಸ ಕಾರ್ಯಕ್ರಮ ಅಂಗವೈಕಲ್ಯ ಸಮುದಾಯಕ್ಕೆ ಕೇಂದ್ರೀಕೃತ ಅಂಶವಾಗಿದೆ. ಹೀಗಾಗಿ, ಎಪಿಡಿಯು ಹೆಚ್ಚು ಅಗತ್ಯವಿರುವ ಹಾಗೂ ರಚನಾತ್ಮಕ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ತರುವ ಕೆಲಸ ಮಾಡುತ್ತಿದೆ. ಜೊತೆಗೆ, ನಮ್ಮ ಭಾಗವಹಿಸುವಿಕೆಯ ಪ್ರಾಮುಖ್ಯತೆಯನ್ನು ಮನಗಂಡಿದ್ದೇವೆ ಎಂದು ಕಾರ್ಯಾಗಾರದ ಉದ್ದೇಶದ ಬಗ್ಗೆ ವಿವರಿಸಿದ್ದಾರೆ.
ವಿಶೇಷವಾಗಿ ವಿಕಲಚೇತನರ ಬೇಡಿಕೆ ಹಾಗೂ ನಿರೀಕ್ಷೆಗಳನ್ನು ನಾವು ಮನಗಂಡಿದ್ದೇವೆ. ಹೀಗಾಗಿ, ಎಪಿಡಿಯು ಈ ಸಮುದಾಯದ ಪರ ನಿಲ್ಲಲು ಹಾಗೂ ಸಮಾನತೆಯನ್ನು ಸಷ್ಟಿಸಲು ಧ್ವನಿಯಾಗುತ್ತಿದೆ. ಉದ್ಯೋಗ, ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಅವರನ್ನು ಸಶಕ್ತರನ್ನಾಗಿಸಲು ಮುಂದಾಗಿದೆ. ಈ ವರ್ಗಕ್ಕೆ ಶಿಕ್ಷಣ ನೀಡಲು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಇದನ್ನು ಬೇರೆಯವರಿಗೆ ತಲುಪಿಸುವ (ಪ್ರಚಾರಕ್ಕಾಗಿ) ಅವಶ್ಯಕತೆ ಇದೆ. ಹೀಗಾಗಿ, ಈ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಕೈಗಾರಿಕೆಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಮೇಲೆ ಪ್ರಭಾವ ಬೀರಲಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಗಾರವು ಯಾವುದೇ ಲಾಭದಾಯಕ ಉದ್ದೇಶದಿಂದ ಆಯೋಜಿಸಿಲ್ಲ. ಈ ಸಮುದಾಯದ ಸಮಸ್ಯೆಗಳ ಪರಿಹಾರದ ಭಾಗವಾಗಲು ಬಯಸುತ್ತಿದ್ದೇವೆ. ಸಮಾರಂಭದಲ್ಲಿ 70ಕ್ಕೂ ಹೆಚ್ಚು ಉದ್ಯೋಗದಾತರು ಭಾಗವಹಿಸಿದ್ದು, ಇದು ಇವರೆಲ್ಲರಿಗೂ ಉಪಯೋಗವಾಗಲಿದೆ ಎಂದು ಹೇಳಿದ್ದಾರೆ.