ಬೆಂಗಳೂರು : ಬೆಳಗಾವಿಯಲ್ಲಿ (Belagavi) ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣಾ ಮಸೂದೆಯನ್ನು (Defense of Lawyers Bill) ಮಂಡಿಸುವುದಾಗಿ ವಕೀಲರ ಸಂಘದ ನಿಯೋಗಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ (CM Basavarj Bommai) ತಿಳಿಸಿದರು.

ವಕೀಲರ ಸಂಘದ ನಿಯೋಗವು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಈ ವೇಳೆ ಪ್ರತಿಕ್ರಿಯಿಸಿದ ಅವರು, ಈ ವಿಷಯ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕರ್ತವ್ಯ ನಿರತ ವಕೀಲರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಅನೇಕರನ್ನು ಕೊಲ್ಲಲಾಗಿದೆ. ಈ ಹಿನ್ನೆಲೆಯಲ್ಲಿ ವಕೀಲರ ರಕ್ಷಣಾ ಕಾಯ್ದೆಯ ಕರಡು ಮಸೂದೆಯನ್ನು ಡಿಸೆಂಬರ್ 18 ರಿಂದ ಪ್ರಾರಂಭವಾಗುತ್ತಿರುವ ಅಧಿವೇಶನದಲ್ಲಿ ಎರಡೂ ಸದನಗಳಲ್ಲಿ ಮಂಡಿಸುವಂತೆ ಮುಖ್ಯಮಂತ್ರಿಗಳನ್ನು ವಕೀಲರ ಸಂಘ, ಬೆಂಗಳೂರು ಹಾಗೂ ರಾಜ್ಯದ ವಿವಿಧ ವಕೀಲ ಸಂಘ ಕೋರಿವೆ.
ನವೆಂಬರ್ 5 ರಂದು ನಡೆದ ವಕೀಲರ ಸಂಘದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಭರವಸೆ ನೀಡಿದ್ದರು. ಕಾಯ್ದೆಯ ಅಂತಿಮ ಕರಡು ಕಾನೂನು ಇಲಾಖೆಯಲ್ಲಿರುವುದಾಗಿ ಸಂಘವು ಮನವಿ ಪತ್ರದಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ಕಾರ್ಯದರ್ಶಿ ಟಿ. ಜಿ.ರವಿ, ಖಜಾಂಚಿ ಹರೀಶ್ ಎಂ.ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೀರ ಯೋಧರು, ಅವಲಂಬಿತರ ಪುನರ್ವಸತಿ
ದೇಶ ರಕ್ಷಣೆಯಲ್ಲಿ ನಿರತರಾಗಿರುವ ವೀರ ಯೋಧರ ಹಾಗೂ ಅವಲಂಬಿತರ ಪುನರ್ವಸತಿಗೆ ಸರಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಾಜಿ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರನ್ನು ಉದೇಶಿಸಿ ಮಾತನಾಡಿರುವ ಅವರು, ನಮ್ಮ ಸೈನಿಕರು ಗಡಿಗಳಲ್ಲಿ, ಗಾಳಿ, ಮಳೆ ಚಳಿ ಎನ್ನದೆ, ನಮ್ಮ ದೇಶದ ಸಾರ್ವಭೌಮತೆ ಹಾಗೂ ನಾಗರಿಕರ ಆಸ್ತಿ ಪಾಸ್ತಿ, ಪ್ರಾಣ ರಕ್ಷಣೆಗೆ ತಮ್ಮ ಜೀವವನ್ನೇ ತ್ಯಾಗ ಮಾಡುತ್ತಿದ್ದಾರೆ.
ಸೈನಿಕರ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರ ಪುನರ್ವಸತಿ ಹಾಗೂ ಅಭಿವೃದ್ದಿಗೆ ಶ್ರಮಿಸುವುದು ಎಲ್ಲಾ ನಾಗರಿಕರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.