ಬೆಂಗಳೂರು(ಡಿ.7): ಬೆಂಗಳೂರಿನ ಆ ಕೊಲೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಯಾಕಂದ್ರೆ ಬರೋಬ್ಬರಿ 20 ಬಾರಿ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿತ್ತು. ಬರ್ಬರವಾಗಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಹೌದು ಕಳೆದ ರಾತ್ರಿ ನಡು ರಸ್ತೆಯಲ್ಲಿ ಗುಂಪೊಂದು ಯುವಕನೊಬ್ಬನ ಮುಖದ ಮೇಲೆ 20 ಬಾರಿ ಕಲ್ಲು ಎತ್ತಿ ಹಾಕಿ ಗುರುತು ಸಿಗದಂತೆ ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ಕೆ.ಪಿ ಅಗ್ರಹಾರ ಠಾಣೆಯಲ್ಲಿ ನಡೆದಿತ್ತು. ಸದ್ಯ ಆ ಪ್ರಕರಣ ಭೇದಿಸಿರುವ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು, ಇಬ್ಬರು ಮಹಿಳೆಯರು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ವಿಜಯಪುರ ಮೂಲದ ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ, ಕಿರಣ್, ಚನ್ನಪ್ಪ, ಕಾಶಿನಾಥ್ ಬಂಧಿತ ಆರೋಪಿಗಳು.
ಪ್ರಕರಣದ ಪ್ರಮುಖ ಆರೋಪಿ ಸರೋಜಾ ಎಂಬಾಕೆ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳು ಡಿ.4ರ ಮುಂಜಾನೆ 1.45ರ ಸುಮಾರಿಗೆ ವಿಜಯಪುರ ಮೂಲದ ಮಂಜುನಾಥ ಬಾಳಪ್ಪ ಜಮಖಂಡಿ ಎಂಬಾತನನ್ನು ಕೆ.ಪಿ.ಅಗ್ರಹಾರ 5ನೇ ಕ್ರಾಸ್‌ನಲ್ಲಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ಮಂಜುನಾಥ ಜಮಖಂಡಿ ಮತ್ತು ಆರೋಪಿ ಸರೋಜಾ ನಡುವೆ ಸಂಬಂಧ ಸರಿಯಿರಲಿಲ್ಲ ಎನ್ನಲಾಗಿದೆ. ಬಂಧಿತ ಆರೋಪಿಗಳು ಹಾಗೂ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸರೋಜಾ ಸಂಬಂಧಿಕರಾಗಿದ್ದು, ಕೆ.ಪಿ.ಅಗ್ರಹಾರದಲ್ಲಿ ನೆಲೆಸಿದ್ದಾರೆ.