ಬೆಂಗಳೂರು : ಚಂದನವನದ ಹಿರಿಯ ನಟ, ಖ್ಯಾತ ನಿರ್ಮಾಪಕರಾದ ದ್ವಾರಕೀಶ್ (Dwarakish) ಅವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯವು (Bangalore University) ಗೌರವ ಡಾಕ್ಟರೇಟ್ (Gourava Doctorate) ಪದವಿ ನೀಡಿ ಗೌರವಿಸಿದೆ.

ಹೌದು, ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಶ್ವವಿದ್ಯಾಲಯದ 57ನೇ ಘಟಿಕೋತ್ಸವದಲ್ಲಿ ದ್ವಾರಕೀಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. (Actor Dwarakish among three to be conferred with honorary doctorates by Bangalore University)
ಸ್ಯಾಂಡಲ್‌ವುಡ್ ಹಾಗೂ ಕನ್ನಡದ ಕುಳ್ಳ ಎಂದೇ ಪ್ರಖ್ಯಾತಿ ಗಳಿಸಿರುವ ನಟ ಡಾ.ದ್ವಾರಕೀಶ್ ಅವರು, ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟರು. ಜೊತೆಗೆ, ಖ್ಯಾತ ನಿರ್ಮಾಪಕ, ನಿರ್ದೇಶಕರೂ ಹೌದು. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂನಲ್ಲೂ ಹಲವು ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ದ್ವಾರಕೀಶ್ ಅವರಿಗೆ ಸಲ್ಲುತ್ತದೆ.
ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣವೊಂದೇ ಮಾರ್ಗ

ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗಳು ಜ್ಞಾನಮಾರ್ಗದಲ್ಲೇ ಬೆಳೆದುಕೊಂಡು ಬಂದಿದ್ದು, ನಮ್ಮ ವಿದ್ಯಾರ್ಥಿ ಸಮುದಾಯ ಕೂಡ ಈ ಉನ್ನತ ಮಾರ್ಗದಲ್ಲೇ ಸಾಗಬೇಕು. ಸುಸ್ಥಿರ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣವೊಂದೇ ಮಾರ್ಗವಾಗಿದ್ದು, ಇದಕ್ಕೆ ಯಾವುದೇ ಅಡ್ಡಹಾದಿಗಳಿಲ್ಲ ಎನ್ನುವುದನ್ನು ಮನಗಾಣಬೇಕು ಎಂದು ಹೇಳಿದ್ದಾರೆ.
ಈ ಶತಮಾನವು ಜ್ಞಾನದ ಯುಗ
21ನೇ ಶತಮಾನವು ಜ್ಞಾನದ ಯುಗವಾಗಿದೆ. 130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಸಮಸ್ಯೆಗಳಾ ಭಾಗವಾಗುವುದು ಮತ್ತು ವ್ಯವಸ್ಥೆಯನ್ನು ದೂಷಿಸುವುದು ಯಾರಿಗೇ ಆದರೂ ತುಂಬಾ ಸುಲಭವಾಗಿದೆ. ಆದರೆ, ವಿದ್ಯಾರ್ಥಿಗಳು ಸಮಸ್ಯೆಯ ಭಾಗವಾಗದೆ ಪರಿಹಾರ ಕ್ರಮಗಳ ಭಾಗವಾಗಬೇಕು. ಆಗಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ದೇಶ ಬಲಾಢ್ಯವಾಗಲು ಶಿಕ್ಷಣ ಸಂಸ್ಥೆಗಳೇ ಕಾರಣ
ಅಮೆರಿಕದಂತಹ ದೇಶವು ಜಾಗತಿಕ ಮಟ್ಟದಲ್ಲಿ ಬಲಾಢ್ಯವಾಗಲು ಅಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳೇ ಕಾರಣ. ನಮ್ಮಲ್ಲಿ ಕೇವಲ ವೈಯಕ್ತಿಕ ಸಾಧನೆಯ ಕಡೆಗೆ ಗಮನವಿದೆಯೇ ವಿನಾ ಸಾಂಘಿಕ ಪ್ರಯತ್ನಗಳಿಗೆ ಆದ್ಯತೆ ಕೊಟ್ಟಿಲ್ಲ. ಈ ಕೊರತೆಯನ್ನು ನಿವಾರಿಸುವತ್ತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದಾಪುಗಾಲಿಡುತ್ತಿದೆ. ಇದರ ಭಾಗವಾಗಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನ ಅಳವಡಿಕೆಯ ಕಾರ್ಯಕ್ರಮಗಳು ವ್ಯಾಪಕವಾಗಿ ನಡೆಯುತ್ತಿವೆ ಎಂದು ಹೇಳಿದ್ದಾರೆ.

ನಾವೇ ನಮ್ಮ ಬದುಕಿನ ಶಿಲ್ಪಿಗಳಾಗಬೇಕು
ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವೇ ನಮ್ಮ ಬದುಕಿನ ಶಿಲ್ಪಿಗಳಾಗಬೇಕು. ಇದು ಸಾಧ್ಯವಾಗಬೇಕೆಂದರೆ ಉನ್ನತಿ ಮತ್ತು ಉತ್ಕೃಷ್ಟತೆಗಳ ಕಡೆಗೆ ವಿದ್ಯಾರ್ಥಿಗಳು ತುಡಿತ ಬೆಳೆಸಿಕೊಳ್ಳಬೇಕು. ಈ ಜ್ಞಾನದ ಯುಗದಲ್ಲಿ ಬೆಂಗಳೂರು ನಗರವು ದೇಶದ ನಂಬರ್ ಒನ್ ನಗರವಾಗಿದ್ದು, ಜಾಗತಿಕ ಸ್ತರದಲ್ಲಿ 24ನೇ ಸ್ಥಾನವನ್ನು ಅಲಂಕರಿಸಿದೆ. ಇಲ್ಲಿರುವ ಉಜ್ವಲ ಅವಕಾಶಗಳನ್ನು ವಿದ್ಯಾರ್ಥಿಗಳು ತಮ್ಮ ಮತ್ತು ಸಮುದಾಯದ ಯಶಸ್ಸಿಗೆ ಬಳಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ಘಟಿಕೋತ್ಸವದಲ್ಲಿ ಹಿರಿಯ ನಟ ದ್ವಾರಕೀಶ್ ಸೇರಿದಂತೆ ಅಮೆರಿಕದ ಕನ್ನಡ ಸಂಘಟನೆಗಳ ಒಕ್ಕೂಟದ ಡಾ.ಅಮರನಾಥ್ ಗೌಡ ಮತ್ತು ಕಲಾವಿದ ಟಿ.ಅನಿಲ್‌ಕುಮಾರ್ ಅವರಿಗೆ ಗೌರವ ಡಾಕ್ಟೊರೇಟ್ ಪ್ರದಾನ ಮಾಡಲಾಯಿತು. ಜೊತೆಗೆ 300 ಚಿನ್ನದ ಪದಕ, 73 ನಗದು ಬಹುಮಾನ ಮತ್ತು 257 ಪಿಎಚ್‌ಡಿ ಪದವಿಗಳನ್ನು ಕೊಡಲಾಯಿತು. ಅಲ್ಲದೆ, 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿಗೆ ಪಾತ್ರರಾದರು.