ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (MLA Election 2023) ಹತ್ತಿರವಾಗುತ್ತಿದ್ದಂತೆ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಟಿಕೆಟ್‌ಗಾಗಿ ಹಾತೊರೆಯುತ್ತಿದ್ದಾರೆ. ಅದರಂತೆ ಈಗಾಗಲೇ ಟಿಕೆಟ್ ಬಯಸಿ ಕಾಂಗ್ರೆಸ್ ಪಕ್ಷದಿಂದ (Congress Party) ಅಭ್ಯರ್ಥಿಯಾಗ ಬಯಸಿದವರು ಕೆಪಿಸಿಸಿಗೆ (KPCC) ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರಿಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ (Eshwara Khandre) ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

ಹೌದು, ಕೆಪಿಸಿಸಿಗೆ ಅರ್ಜಿ ಸಲ್ಲಿಸಿದವರಿಗೆ ಶೇ.99ರಷ್ಟು ಟಿಕೆಟ್ ಸಿಗುತ್ತದೆ. ಅರ್ಜಿ ಸಲ್ಲಿಸದವರಿಗೆ ಟಿಕೆಟ್ ನೀಡುವ ಕುರಿತಂತೆ ರಾಜ್ಯ ನಾಯಕರು ಹಾಗೂ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು ಕೇವಲ ಶೇ. 1 ಅಷ್ಟೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ್ದಾರೆ. ಬಿಜೆಪಿಯವರು ರೌಟಿ ಶೀಟರ್ ಸೇರಿಸಿಕೊಳ್ಳುತ್ತಿದ್ದಾರೆ. ವಿನಾಕಾರಣ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅತ್ಯಾಚಾರ ಹೆಚ್ಚಾದ್ರೆ ಅದು ಬಿಜೆಪಿ ಸಾಧನೆನಾ?
ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶೇ. 40ರಷ್ಟು ಕಮೀಷನ್ ಪಡೆಯುತ್ತಿದೆ. ಎಲ್ಲಾ ವಿಚಾರಗಳಲ್ಲಿಯೂ ಕಾಂಗ್ರೆಸ್ ಮೇಲೆ ಆರೋಪ ಮಾಡುವ ಬಿಜೆಪಿ ಎಲ್ಲದ್ದನ್ನೂ ಜಾಸ್ತಿ ಮಾಡಿದೆ. ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಳವಾದರೆ ಅದು ಬಿಜೆಪಿ ಸಾಧನೆನಾ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.
ಖರ್ಗೆ ಹೇಳಿಕೆಗೆ ಸ್ವಾಗತ ಎಂದ ಖಂಡ್ರೆ
ಇನ್ನೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕೆಲಸ ಮಾಡದಿದ್ದರೆ ಖುರ್ಚಿ ಬಿಡಿ ಎಂಬ ಹೇಳಿಕೆ ಸ್ವಾಗತಾರ್ಹ ಎಂದಿದ್ದಾರೆ. ರಾಜ್ಯ, ಜಿಲ್ಲಾ, ತಾಲೂಕು, ಬೂತ್ ಮಟ್ಟದಲ್ಲಿಯೂ ಪಕ್ಷ ಸಂಘಟಿತವಾಗಬೇಕಿದೆ. ನಾಯಕರು, ಕಾರ್ಯಕರ್ತರನ್ನು ತಲುಪಬೇಕಿದೆ. ಚುನಾವಣೆಯಲ್ಲಿ ಗೆಲ್ಲಬೇಕಾದರೆ ಖರ್ಗೆ ಅವರು ಹೇಳಿದಂತೆ ನಾವು ಮಾಡಬೇಕಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಬೇಕು..!
ಮುಂಬರುವ ವಿಧಾನಸಭೆ ಚುನಾವಣಾ ಫಲಿತಾಂಶ ಬಂದ ಮೇಲೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈಗಲೇ ಏನನ್ನೂ ಹೇಳಲು ಆಗದು. ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Vistara : ವಿಸ್ತಾರ ಚಿಹ್ನೆ ಬಳಕೆ : ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದ ದೆಹಲಿ ಹೈಕೋರ್ಟ್
ಮಹಾರಾಷ್ಟ್ರಕ್ಕೆ ಹತ್ತು ಪಟ್ಟು ದಂಡ
ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜಕಾರಣ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಕನ್ನಡದ ಒಂದಿಂಚೂ ನೆಲ ಕೊಡೋದಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಪದೇ ಪದೇ ಗಡಿ ಖ್ಯಾತೆ ತೆಗೆದಿರುವ ಮಹಾರಾಷ್ಟ್ರಕ್ಕೆ ಹತ್ತು ಪಟ್ಟು ದಂಡ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.