ಬೆಂಗಳೂರು(ಡಿ.5): ಕಾಲೇಜು ದಿನಗಳಿಂದಲೂ ತಮ್ಮ ಮೇಲೆ ರ್ಯಾಗಿಂಗ್, ದಬ್ಬಾಳಿಕೆ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ಸಹೋದ್ಯೋಗಿಯೊಬ್ಬನನ್ನು ಕೊಂದು ರಾಜ ಕಾಲುವೆಗೆ ಎಸೆದಿದ್ದ ಕಾನೂನು ಸಂಘರ್ಷಕ್ಕೊಳಗಾದವ ಸೇರಿ ಐವರು ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಎರಡೇ ಗಂಟೆಯಲ್ಲಿ ಆರೋಪಿಗಳನ್ನು ಹೆಡೆ ಮುರಿಕಟ್ಟಿದ್ದಾರೆ. ಬಾಬುಸಾಬ್ ಪಾಳ್ಯದ ದಿನೇಶ್ ಸಿಂಗ್ ದಾಮಿ(19), ಶೇರ್‌ಸಿಂಗ್ ದಾಮಿ(20), ದೀಪಕ್(19), ನರೇಂದ್ರ(20) ಬಂಧಿತ ಆರೋಪಿಗಳು.
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಆರೋಪಿಗಳು ನ.30ರಂದು ನೇಪಾಳ ಮೂಲದ ಧನ್‌ಸಿಂಗ್ ದಾಮಿ ಎಂಬಾತನನ್ನು ಕೊಲೆಗೈದು ಬಾಬುಸಾಬು ಪಾಳ್ಯದ ರಾಜಕಾಲುವೆಯಲ್ಲಿ ಎಸೆದಿದ್ದರು. ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿ ನೇಪಾಳ ಮೂಲದವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಬಾಬುಸಾಬ್ ಪಾಳ್ಯದ ರಾಜಕಾಲುವೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆೆಯಾಗಿತ್ತು. ಮೃತದೇಹ ಹೊರತೆಗೆದು ಪರಿಶೀಲಿಸಿದಾಗ, ಆತನ ದೇಹಗಳ ಮೇಲೆ ಗಾಯದ ಗುರುತು, ಊದಿಕೊಂಡಿರುವುದು ಪತ್ತೆೆಯಾಗಿತ್ತು. ನಂತರ ಕೊಲೆ ಪ್ರಕರಣ ದಾಖಲಿಸಿಕೊಂಡು ಮೃತನ ಮಾಹಿತಿ ಸಂಗ್ರಹಿಸಲಾಗಿತ್ತು. ಆಗ ಕೊಲೆಯಾದ ಯುವಕ ನೇಪಾಳ ಮೂಲದವನಾಗಿದ್ದು, ಬಾಬುಸಾಬ್ ಪಾಳ್ಯದ ನಂಜಪ್ಪ ಗಾರ್ಡನ್‌ನಲ್ಲಿರುವ ಪಿಜಿಯಲ್ಲಿ ಹೌಸ್‌ಕಿಪಿಂಗ್ ಕೆಲಸ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ. ಬಳಿಕ ಅಲ್ಲೇ ಇದ್ದ ಕೆಲ ಕೆಲಸಗಾರರನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯಾದ ಧನ್‌ಸಿಂಗ್ ದಾಮಿ ಹಾಗೂ ಬಂಧಿತ ಆರೋಪಿಗಳು ನೇಪಾಳ ಮೂಲದವರು. ನಾಲ್ಕು ತಿಂಗಳ ಹಿಂದೆ ಭಾರತಕ್ಕೆ ಬಂದು ಎರಡು ತಿಂಗಳಿಂದ ನಗರದ ಬಾಬುಸಾಬ್ ಪಾಳ್ಯದ ಎಸ್.ಎಸ್.ಪಿಜಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕೊಲೆಯಾದ ಧನ್‌ಸಿಂಗ್ ದಾಮಿ ಆರೋಪಿಗಳಿಗಿಂತ ವಯಸ್ಸಿನಲ್ಲಿ ದೊಡ್ಡವನಾಗಿದ್ದು, ಹೀಗಾಗಿ ಆರೋಪಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ. ಮದ್ಯ ಕುಡಿಸಿ, ಸಿಗರೇಟ್ ಕೊಡಿಸಿ ಎಂದು ಬೇಡಿಕೆ ಇಡುತ್ತಿದ್ದ. ಕೆಲವೊಮ್ಮೆ ಮದ್ಯ ಸೇವಿಸಿ ಹಲ್ಲೆ ಕೂಡ ಮಾಡಿತ್ತಿದ್ದನಂತೆ. ಜತೆಗೆ ಈ ಮೊದಲೇ ನೇಪಾಳದಲ್ಲಿ ಕಾಲೇಜಿನಲ್ಲಿ ಓದುವಾಗಲೂ ದಬ್ಬಾಳಿಕೆ ಮಾಡುತ್ತಿದ್ದ. ಅದರಿಂದ ಬೇಸತ್ತು ಕೊಲೆಗೆ ಸಂಚು ರೂಪಿಸಲಾಯಿತು ಎಂದು ಆರೋಪಿಗಳು ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ
ನ.30ರಂದು ರಾತ್ರಿ 11.30ರ ಸುಮಾರಿಗೆ ಮದ್ಯ ಸೇವಿಸಿ ಪಿಜಿಗೆ ಬಂದಿದ್ದ ದನ್ ಸಿಂಗ್ ದಾಮಿ, ಸಿಗರೇಟ್ ಕೊಡಿಸುವಂತೆ ಆರೋಪಿಗಳನ್ನು ಪೀಡಿಸಿದ್ದಾನೆ. ಅಷ್ಟರಲ್ಲಿ ಈತನ ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು, ಮೂವರು ಆರೋಪಿಗಳು ಬಾಬುಸಾಬ್ ಪಾಳ್ಯದ ರಾಜಕಾಲುವೆ ಬಳಿ ಕಾಯುತ್ತಿದ್ದರು. ಇಬ್ಬರು ಸಿಗರೇಟ್ ಕೊಡಿಸುವುದಾಗಿ ಪಿಜಿಯಿಂದ ಹೊರಗಡೆ ಕರೆತಂದಿದ್ದಾರೆ. ನಂತರ ರಾಜ ಕಾಲುವೆ ಬಳಿ ಕರೆದೊಯ್ದು ಹಲ್ಲೆ ನಡೆಸಿ, ಧನ್ ಸಿಂಗ್ ಧರಿಸಿದ್ದ ಬೆಲ್ಟ್ ಬಿಚ್ಚಿಕೊಂಡು ಕುತ್ತಿಗೆ ಬಿಗಿದು ಕೊಲೆಗೈದಿದ್ದಾಾರೆ. ನಂತರ ಮೃತ ದೇಹವನ್ನು ರಾಜಕಾಲುವೆಗೆ ಎಸೆದಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.