ಬೆಂಗಳೂರು : ವಿಸ್ತಾರ ವಾಣಿಜ್ಯ ಚಿಹ್ನೆ ಬಳಕೆ ವಿವಾದ ಸಂಬಂಧ ಡಿಸೆಂಬರ್ 15ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ದೆಹಲಿ ಹೈಕೋರ್ಟ್ ಟಾಟಾ ಏರ್‌ಲೈನ್ಸ್ ಹಾಗೂ ಕನ್ನಡ ಸುದ್ದಿ ಸಂಸ್ಥೆಗೆ ಸೂಚಿಸಿದೆ.

ಈ ಸಂಬಂಧ ವಿಚಾರ ನಡೆಸಿರುವ ನ್ಯಾಯಾಲಯವು, ಕಕ್ಷಿದಾರರ ಹಕ್ಕುಗಳು ಮತ್ತು ವ್ಯಾಜ್ಯ ವಿಚಾರಗಳಿಗೆ ಧಕ್ಕೆಯಾಗದಂತೆ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಎರಡೂ ಕಡೆಯವರು ಯಾವುದೇ ಒತ್ತಾಯಪೂರ್ವಕ ಕ್ರಮಕ್ಕೆ ಮುಂದಾಗಬಾರದು ಎಂದು ಆದೇಶಿಸಿದೆ.
ವಕೀಲರಾದ ಪ್ರವೀಣ್ ಆನಂದ್, ಅಚ್ಯುತನ್ ಶ್ರೀಕುಮಾರ್ ಮತ್ತು ರೋಹಿಲ್ ಬನ್ಸಾಲ್ ಅವರು ಟಾಟಾ ಏರ್‌ಲೈನ್ಸ್ ಪರ ವಾದ ಮಂಡಿಸಿದ್ದರು. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ವಕೀಲರಾದ ಹಿಮಾ ಲಾರೆನ್ಸ್, ವಿಕ್ರಮ್ ಹೆಗ್ಡೆ, ಅಮಿತ್ ಭಂಡಾರಿ, ಸಿದ್ಧಾರ್ಥ್ ಸೀಮ್, ಶಿರೀಷ್ ಕೃಷ್ಣ, ಅಭಿನವ್ ಹಂಸರಾಮನ್ ಮತ್ತು ಜಾಗೃತ್ ವ್ಯಾಸ್ ಅವರು ವಿಸ್ತಾರ ಕನ್ನಡ ಸುದ್ದಿ ವಾಹಿನಿ ಪರ ತಮ್ಮ ವಾದ ಮಂಡಿಸಿದ್ದರು.
ಸಂಸ್ಥೆಗೆ ಮಧ್ಯಂತರ ತಡೆಯಾಜ್ಞೆ
ವಿಸ್ತಾರ ವಿವಾದ ಅರ್ಜಿ ಸಂಬಂಧ ನವೆಂಬರ್ 22 ರಂದು, ನ್ಯಾಯಾಲಯವು ವಿಸ್ತಾರ ವಾಣಿಜ್ಯ ಚಿಹ್ನೆ ಅನ್ನು ಬಳಸದಂತೆ ಸುದ್ದಿ ಸಂಸ್ಥೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೀಗ, ವಾಣಿಜ್ಯ ಚಿಹ್ನೆ ಉಲ್ಲಂಘನೆ ಪ್ರಕರಣ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕನ್ನಡ ಸುದ್ದಿವಾಹಿನಿ ವಿಸ್ತಾರ ಹಾಗೂ ಟಾಟಾ ಎಸ್‌ಐಎ ಏರ್‌ಲೈನ್ಸ್‌ಗೆ ಸೂಚನೆ ನೀಡಿದೆ.
ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದ ವಿಸ್ತಾರ
ನ್ಯಾಯಾಲಯವು ನೀಡಿದ್ದ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆಯನ್ನು ವಿರೋಧಿಸಿ ವಿಸ್ತಾರ ಸುದ್ದಿ ವಾಹಿನಿ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ಈ ಸಂಬಂಧ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಡಿಸೆಂಬರ್ 15ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದ್ದಾರೆ.
ಟಾಟಾ ಎಸ್‌ಐಎ ವಾದ ಇದು
ತಾನು, ವಿಸ್ತಾರ ವಾಣಿಜ್ಯ ಚಿಹ್ನೆಯ ನೋಂದಾಯಿತ ಮಾಲೀಕ. ತನಗೆ ಮಾತ್ರ ಅದನ್ನು ಬಳಸುವ ಹಕ್ಕಿದೆ. ಅದನ್ನು ಬೇರೆಯವರು ಬಳಸುವಂತಿಲ್ಲ ಎಂದು ಟಾಟಾ ಎಸ್‌ಐಎ ನ್ಯಾಯಾಲಯದ ಮೊರೆ ಹೋಗಿತ್ತು. ಪ್ರಸಿದ್ಧ ವಾಣಿಜ್ಯ ಚಿಹ್ನೆ ಎಂದು ಘೋಷಿಸಲಾದ ವಿಸ್ತಾರ ಉನ್ನತ ಮಟ್ಟದ ರಕ್ಷಣೆಗೆ ಅರ್ಹ ಎಂದು ಹೇಳಿತ್ತು.
ಅಪ್ರಾಮಣಿಕ ರೀತಿಯ ನಕಲು ಎಂದಿದ್ದ ವಿಸ್ತಾರ
ಇದಕ್ಕೆ ಪ್ರತಿಯಾಗಿ ವಿಸ್ತಾರ ವಾಹಿನಿಯು ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ‘ವಿಸ್ತಾರ ಕನ್ನಡ ಸುದ್ದಿವಾಹಿನಿ ವಾಣಿಜ್ಯ ಚಿನ್ಹೆಯನ್ನು ಅಪ್ರಾಮಣಿಕ ರೀತಿಯಲ್ಲಿ ನಕಲು ಮಾಡಿದ್ದಾರೆ. ಅದನ್ನು ಅಳವಡಿಸಿಕೊಳ್ಳಲು ಅವರಿಗೆ ಯಾವುದೇ ಸಮರ್ಥನೀಯ ಕಾರಣ ಇಲ್ಲ’ ಎಂದು ತಿಳಿಸಿತ್ತು.