ಬೆಂಗಳೂರು(ಡಿ.3): ರಾಜ್ಯಾದ್ಯಂತ ಅನಧಿಕೃ ಸಮೀಕ್ಷೆಗಳು ನಡೆದು ಅಲ್ಪಸಂಖ್ಯಾತರ ಮತದಾರರನ್ನು ಡಿಲೀಟ್ ಮಾಡಲಾಗುತ್ತಿದೆ ಎನ್ನುವುದು ಸುಳ್ಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪ್ರವಾಸ ಕೈಗೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮತದಾರ ಪಟ್ಟಿ ಹಗರಣ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು
ಈಗಾಗಲೇ ರಾಜ್ಯ ಚುನಾವಣೆ ಆಯೋಗ ಈ ಬಗ್ಗೆ ಗಮನ ಹರಿಸಿದೆ. ಚುನಾವಣಾ ಆಯೋಗದ ನೇತೃತ್ವದಲ್ಲಿ ಮತದಾರರನ್ನು ಪಟ್ಟಿ ಪರಿಷ್ಕರಣೆಯಾಗುತ್ತದೆ. ಈ ಕುರಿತು ಭಾರತ ಮತ್ತು ರಾಜ್ಯ ಚುನಾವಣಾ ಆಯೋಗ ಕಾಳಜಿ ವಹಿಸಿದೆ. ಈ ರೀತಿಯ ದೂರುಗಳು ಬಂದಲ್ಲಿ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು ಎಂದು ಹೇಳಿದ್ದಾರೆ.
ಆ ಕೆಲಸ ಚುನಾವಣಾ ಆಯೋಗ ಮಾಡಬೇಕು
ಅನಧಿಕೃತವಾಗಿ ಮತದಾರರನ್ನು ಸೇರಿಸುವ ಕೆಲಸವೂ ಆಗಿದೆ. ಎರಡು ಕಡೆಗಳಲ್ಲಿ ಮತದಾರರ ಚೀಟಿ ಹೊಂದಿರುವವರೂ ಇದ್ದಾರೆ. ಅಂಥವನ್ನು ತೆಗೆಯುವ ಕೆಲಸ ಆಯೋಗ ಮಾಡಬೇಕು. ಯಾವುದೇ ಕಾರಣಕ್ಕೂ ಅಧಿಕೃತ ಜನರಿಗೆ ಮತದಾನದ ಹಕ್ಕು ಇರಲೇಬೇಕು. ಅದನ್ನು ಮೇಲ್ವಿಚಾರಣೆ ಮಾಡುವ ಕೆಲಸ ಚುನಾವಣಾ ಆಯೋಗ ಮಾಡಬೇಕು ಎಂದು ತಿಳಿಸಿದ್ದಾರೆ.
ಕನ್ನಡಿಗನ ಮೇಲೆ ಹಲ್ಲೆ: ಸೂಕ್ತ ಕ್ರಮಕ್ಕೆ ಸೂಚನೆ
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಮೇಲೆ ಹಲ್ಲೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನಾನು ತನಿಖೆ ಕೈಗೊಳ್ಳಲು ಪೋಲಿಸ್ ಆಯುಕ್ತರಿಗೆ ಸೂಚಿಸಲಾಗಿದೆ. ವರದಿ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಪೊಲೀಸರು ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸತ್ಯಾಸತ್ಯತೆಯನ್ನು ತಿಳಿದುಕೊಂಡು ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.