ಬೆಂಗಳೂರು(ನ.25): ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂಬ ಹೆಸರು ಪಡೆದು ಇಡೀ ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಟಿಯರಲ್ಲಿ ಒಬ್ಬರು. ಕಿರಿಕ್ ಪಾರ್ಟಿಯ ನಂತರ ತೆಲುಗಿನಲ್ಲಿ ಆಫರ್ ಬಂತು ಎಂದು ಅತ್ತ ಮುಖ ಮಾಡಿದವರು ಮತ್ತೆ ತಿರುಗಿ ನೋಡಿಯೇ ಇಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇವರದ್ದೇ ಸುದ್ದಿ. ಅದೇನಪ್ಪಾ ಅಂದ್ರೆ ಟ್ರೋಲಿಗರಿಗೆ ರಶ್ಮಿಕಾ ಮಂದಣ್ಣ ಆಹಾರವಾಗಿರುವ ವಿಚಾರ.
ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಕಾಂತಾರ, ಇಡೀ ಬಾಕ್ಸ್ ಆಫೀಸ್ ಅನ್ನೇ ಕೊಳ್ಳೆ ಹೊಡೆದು ಮೆರೆಯುತ್ತಿರುವ ಸಿನಿಮಾ ಇದಾಗಿದೆ. ಈ ಸಿನಿಮಾವನ್ನುಇಡೀ ಚಿತ್ರರಂಗವೇ ಹಾಡಿ ಹೊಗಳುವಾಗ ರಶ್ಮಿಕಾ ಮಂದಣ್ಣ ಅವರ ಜೊತೆ ಚಿತ್ರ ವೀಕ್ಷಣೆ ಬಗ್ಗೆ ಕೇಳಿದಾಗ ಇನ್ನೂ ಚಿತ್ರ ನೋಡಿಲ್ಲ ಎಂಬ ರಿಯಾಕ್ಷನ್ ಕೊಟ್ಟಿರುವ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಮೊದಲ ಸಿನಿಮಾ ಆಫರ್ ಬಂದ ವಿಷಯ ಮಾತನಾಡುವಾಗ ಮೊದಲು ನಟಿಸಿದ ಚಿತ್ರ, ಯಾವ ನಿರ್ಮಾಣ ಸಂಸ್ಥೆ ಎಂದು ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡದೆ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದ್ದಾರೆ. ಈ ವಿಡಿಯೋಗೆ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ರೀತಿ ನಡೆದುಕೊಂಡಿದ್ದು ಅನೇಕರಿಗೆ ಇಷ್ಟವಾಗಿಲ್ಲ. ಈ ವಿಡಿಯೋ ರಿಷಬ್ ಶೆಟ್ಟಿ ನೋಡಿದ್ದಾರೆ ಎನಿಸುತ್ತಿದೆ. ರಶ್ಮಿಕಾ ಮಂದಣ್ಣ ವರ್ತನೆಗೆ ತಿರುಗೇಟು ಎಂಬಂತೆ ರಿಷಬ್ ಮತ್ತೊಂದು ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಅದೇ ರೀತಿ ಸನ್ನೆ ಮಾಡಿ ಉತ್ತರಿಸಿದ್ದಾರೆ.
ಇನ್ನೂ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ರಶ್ಮಿಕಾ ಪರವಾಗಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಯಾವುದೇ ಕಾರಣಕ್ಕೆ ಮುರಿದುಕೊಂಡಿರಬಹುದು, ಆಕೆಯದೇ ನಿರ್ಧಾರವಾಗಿರಬಹುದು, ಅಥವಾ ಕುಟುಂಬದ್ದಾಗಿರಬಹುದು ಅಥವಾ ರಕ್ಷಿತ್ ರಶ್ಮಿಕಾ ಇಬ್ಬರದ್ದೂ ಆಗಿರಬಹುದು. ಅದು ಕೆರಿಯರ್ ಕಾರಣಕ್ಕೇ ಇರಬಹುದು ಅಥವಾ ಪರ್ಸನಲ್ ಕಾರಣಗಳಿಗೇ ಇರಬಹುದು. ಅದು ಅವರ ನಿರ್ಧಾರ. ಮದುವೆ, ಪ್ರೇಮ, ಪ್ರಣಯಗಳೆಲ್ಲ ವೈಯಕ್ತಿಕ ಆಯ್ಕೆಗಳು. ಯಾರ ನಿರ್ಧಾರಕ್ಕೂ ಯಾರ ಹೇಳಿಕೆಗೂ ಯಾರ ಒತ್ತಡಕ್ಕೂ ಸಂಬಂಧಿಸಿದ್ದಲ್ಲ. ಅಂತದ್ದರಲ್ಲಿ ನಿಶ್ಚಿತಾರ್ಥ ಮುರಿದುಕೊಂಡಿದ್ದಕ್ಕೆ ಆಕೆಯನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿ, ಆಕೆಯೊಬ್ಬಳನ್ನೇ ಹೊಣೆಯಾಗಿಸಿ, ಪ್ರತೀದಿನವೆಂಬಂತೆ ಆಕೆಗೆ ಮಾನಸಿಕ ಹಿಂಸೆ ಕೊಟ್ಟಿದ್ದು ಈ ರಾಜ್ಯದ ಮಾಧ್ಯಮಗಳೆಂಬ ಕೊಳಕು ತೊಟ್ಟಿಗಳು ಮತ್ತು ದುರಭಿಮಾನಿಗಳು ಎಂಬ ಪೋಸ್ಟ್ ಕೂಡ ಗಮನಿಸಬಹುದು.
ಇಷ್ಟೆಲ್ಲ ಕಣ್ಮುಂದೆ ನಡೆಯುತ್ತಿರುವಾಗ ಅವೆಲ್ಲವನ್ನೂ ನೋಡಿಕೊಂಡು ಸುಮ್ಮನಿದ್ದಿದ್ದು ತಾನೊಬ್ಬ ಭಗ್ನಪ್ರೇಮಿಯೆಂಬ ಪೋಸು ಕೊಟ್ಟ ರಕ್ಷಿತ್ ಶೆಟ್ಟಿ. ನಿಜವಾಗ ಪ್ರೀತಿ ತಾನು ಪ್ರೀತಿಸಿದವರನ್ನು ಅವಮಾನಿಸೋದನ್ನ ಸಹಿಸೋದಿಲ್ಲ. ಆತ ಮಾಧ್ಯಮ ಮತ್ತು ಅಭಿಮಾನಿಗಳನ್ನು ಈ ಟ್ರೋಲ್ ನಿಲ್ಲಿಸುವಂತೆ ಕೇಳಿಕೊಳ್ಳಬಹುದಿತ್ತು. ಕೇಳದಿದ್ದರೆ ಪ್ರತಿಭಟಿಸಬಹುದಿತ್ತು. ಮಾಡಲಿಲ್ಲ. ಆಕೆ ಎಲ್ಲೂ ರಕ್ಷಿತ್ ಬಗ್ಗೆಯಾಗಲಿ, ಅವರ ಸ್ನೇಹಿತರ ಬಳಗದ ಬಗ್ಗೆಯಾಗಲಿ ಒಂದೂ ಮಾತಾಡಿಲ್ಲ.
ಹೆಣ್ಣನ್ನು ಖರೀದಿ ಮಾಡಿದ್ದೀರೊ? ಆಕೆ ಹೋದ ಮೇಲೂ ಹಗೆ ಯಾಕೆ?! ಅವಳಿಲ್ಲದ ಬದುಕು ಆ ಪರಿ ಬರಗೆಟ್ಟಿದೆಯೊ!! ಅಥವಾ ಗಂಡೆನ್ನುವ ಅಹಂ ಕಾರಣವೊ?! ಸ್ವಲ್ಪವಾದರೂ ಮರ್ಯಾದೆ ಬೇಡವೇ? ಆಕೆ ತನ್ನ ಕರಿಯರ್ ಕಟ್ಟಿಕೊಳ್ಳುತ್ತಿದ್ದಾಳೆ. ಈ ದೇಶದ ನೆಲ ಯಾರಪ್ಪನ ಮನೆಯ ಸೊತ್ತು? ಎಲ್ಲೊ ಯಾರಿಲ್ಲದೆಯೂ ಬದುಕು ರೂಪುಗೊಳ್ಳುತ್ತದೆ. ಬದುಕುವ ಛಲವಿರಬೇಕಷ್ಟೆ! ಎಂಬ ಪೋಸ್ಟ್ ಗಳು ರಶ್ಮಿಕಾ ಮಂದಣ್ಣ ಪರ ಕೇಳಿಬರುತ್ತಿವೆ.
ಇದನ್ನೂ ಓದಿ: 31 ಗೋವು ದತ್ತು ಪಡೆದ ಚಿತ್ರನಟ ಸುದೀಪ್