ಬೆಂಗಳೂರು (ಅ.31 ): ಚಳಿಗಾಲ ಬಂತೆಂದರೆ ಸಾಕು ನಮ್ಮ ದೇಹವನ್ನು ರಕ್ಷಣೆ ಮಾಡಬೇಕಾದರೆ ಕೆಲವು ಬಟ್ಟೆಗಳನ್ನು ಕಡ್ಡಾಯವಾಗಿ ಧರಿಸಬೇಕು. ಕೊರೆವ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಲು ಯಾವ ರೀತಿಯ ಬಟ್ಟೆ ಧರಿಸುವುದು ಎಂಬ ಯೋಚನೆ ಬರುವುದು ಸಾಮಾನ್ಯ. ಅದಕ್ಕೆ ತಕ್ಕಂತೆಯೇ ಚಳಿಗಾಲಕ್ಕೆಂದು ಮಾರುಕಟ್ಟೆಗೆ ವಿವಿಧ ಮಾದರಿಯ ಬಟ್ಟೆಗಳು ಕಾಲಿಟ್ಟಿವೆ. ಚಳಿಗಾಲ ಬಂತೆಂದರೆ ಸಾಕು ಮೈ ತುಂಬಾ ಬಟ್ಟೆ ಧರಿಸಿ ದೇಹವನ್ನು ಬೆಚ್ಚಗಿಡಲು ಮುಂದಾಗುತ್ತೇವೆ. ಅದರಂತೆ ಸ್ವೆಟರ್, ಜಾಕೇಟ್ ಬಳಸಿ ನಮ್ಮ ದೇಹವನ್ನು ಬೆಚ್ಚಗಿಡುತ್ತವೆ.
ಇದನ್ನೂ ಓದಿ: ಗುಜರಾತ್‌ನ ಮೊರ್ಬಿಯಲ್ಲಿ ನಡೆದ ದುರಂತಕ್ಕೆ ಆ ಒಂದು ನಿರ್ಧಾರವೇ ಕಾರಣವಾಯ್ತಾ ?
ಸ್ವೆಟರ್ ಗಳಿಗೆ ಆದ್ಯತೆ ಹೆಚ್ಚಿದೆ
ಚಳಿಗಾಲದಲ್ಲಿ ತೆಳು ಬಣ್ಣದ ಬಟ್ಟೆಗಳಿಗೆ ಬೇಡಿಕೆ ಕಡಿಮೆಯಾಗಿ ಕಡುವರ್ಣದ ಬಟ್ಟೆಗಳಿಗೆ ಬೇಡಿಕೆ ಬಂದಿದೆ. ಈ ರೀತಿಯ ಬಟ್ಟೆಗಳು ಬಿಸಿಲನ್ನು ಬಹು ಬೇಗನೆ ಹೀರಿ ನಮ್ಮ ದೇಹವನ್ನು ಬೆಚ್ಚಗಿಡಲು ಸಹಕಾರಿ. ಚುಮು ಚುಮು ಚಳಿಯಲ್ಲಿ ಶುದ್ಧ ಹತ್ತಿ, ರೇಷ್ಮೆ, ಉಣ್ಣೆ ಮತ್ತು ಲೆನಿನ್ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ. ಹಿಂದೆಲ್ಲ ಸ್ವೆಟರ್ ನಲ್ಲಿ ಹೆಚ್ಚು ಆಯ್ಕೆಗಳಿರಲಿಲ್ಲ. ಈಗ ವೇಗ ಪಡೆದಿರುವ ಫ್ಯಾಶನ್ ಕ್ಷೇತ್ರದಲ್ಲಿ ಸ್ವೆಟರ್ ಗೂ ಆದ್ಯತೆ ಬಂದಿದೆ. ಇಂದಿನ ಫ್ಯಾಶನ್ ಟ್ರೆಂಡ್ ಗಳಲ್ಲಿ ಲೆದರ್ ಬಟ್ಟೆಗಳು ಕೇವಲ ಜಾಕೆಟ್ ಅಥವಾ ಪ್ಯಾಂಟ್ ಗಳನ್ನೊಳಗೊಂಡಂತೆ ಡ್ರೆಸ್ ಗಳು, ಕೋ-ಆರ್ಡ್ ಸೆಟ್‍ಗಳು, ಶಾಟ್ರ್ಸ್ ಮತ್ತು ಟಾಪ್ ಗಳಿಗೆ ವ್ಯಾಪಕವಾಗಿ ವಿಸ್ತರಿಸುತ್ತಿದೆ.
ಉಲ್ಲನ್ ಬಟ್ಟೆ
ಇತ್ತೀಚಿನ ದಿನಗಳಲ್ಲಿ ಮಾಡರ್ನ್ ಮಾದರಿಯಲ್ಲಿಯೂ ಉಲ್ಲನ್ ಬಟ್ಟೆಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಚಳಿಗಾಲಕ್ಕೆಂದೇ ಸಿದ್ಧಪಡಿಸಿದ ಉಲ್ಲನ್ ಥೆಡ್ ಗಳಿಂದ ಸಿದ್ಧವಾದಂತಹ ಪ್ಯೂಷನ್ ವೇರ್‌ಗಳಾದ ಕುರ್ತಾಗಳು, ಶರ್ಟ್ ಗಳು, ಟಾಪ್‌ಗ್ಳಿಗೆ ಬೇಡಿಕೆ ಇದೆ. ಅದರಂತೆಯೇ ಉಲ್ಲನ್ ಸ್ವೆಟರ್ ಗಳ ಖರೀದಿಯೂ ಜೋರಾಗಿದೆ. ನಿಮ್ಮ ಟೀಶರ್ಟ್ ಒಳಗೆ ಹಾಕಿ ಮೇಲೆ ಸ್ವೇಟರ್ ಹಾಕುವುದಾದರೆ ಅರ್ಧ ತೋಳಿನ ಸ್ವೆಟರ್ ಹಾಕಿಕೊಳ್ಳಿ. ಚೆಕ್ಸ್ ಸ್ವೆಟರ್ ಗಳು ಮಾರುಕಟ್ಟೆಯಲ್ಲಿ ತೆಳುವರ್ಣದ ಬಣ್ಣಗಳಲ್ಲಿ ದೊರಕುತ್ತವೆ. ಬಟನ್ ಸ್ವೆಟರ್ ನಿಮ್ಮ ದೇಹದ ಮೈಮಾಟವನ್ನು ಎತ್ತಿ ತೋರಿಸುತ್ತದೆ ಎಂಬುದನ್ನು ಮರೆಯಬೇಡಿ.
ಜಾಕೆಟ್ ಗಳದ್ದೇ ಕಾರುಬಾರು
ವಾಹನಗಳಲ್ಲಿ ಜಾಲಿ ರೈಡ್ ಹೋಗುವಾಗ ಶೀತನೆಯ ಗಾಳಿಯಿಂದ ಮೈ ಬೆಚ್ಚಗಾಗಿಸಲು ವಿವಿಧ ಮಾದರಿಯ ಜಾಕೆಟ್ ಗಳು ಮಾರುಕಟ್ಟೆಗೆ ಬಂದಿವೆ. ಅಂದಹಾಗೆ ಈ ರೀತಿಯ ಜಾಕೆಟ್ ಗಳನ್ನು ಮನೆಗಳಲ್ಲಿ, ಕಚೇರಿ ಕೆಲಸಗಳಿಗೆ ತೆರಳುವಾಗಲೂ ಹಾಕಬಹುದಾಗಿದೆ. ಡ್ರೆಸ್ ಮೇಲೆ ಜಾಕೆಟ್ ಧರಿಸುವು ಕೂಡ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದ್ದು, ಲೆದರ್ ಜ್ಯಾಕೆಟ್, ಡೆನಿಮ್ ಜಾಕೆಟ್ ಖರೀದಿ ಹೆಚ್ಚಾಗುತ್ತಿದೆ. ಜಾಕೆಟ್ ಖರೀದಿಯಲ್ಲಿ ಬಣ್ಣಗಳಿಗೂ ಪ್ರಾಮುಖ್ಯತೆ ಇದ್ದು, ಕಪ್ಪು, ನೀಲಿ, ಬಿಳಿಯ ಜಾಕೆಟ್ ಖರೀದಿಯೇ ಹೆಚ್ಚು. ಇನ್ನು ಕೈಯಿಂದ ನೇಯ್ದ ಖಾದಿಗೆ ಯಾವ ಕಾಲದಲ್ಲಿಯೂ ಬೇಡಿಕೆ ಕಡಿಮೆಯಾಗುವುದಿಲ್ಲ. ಅದರಂತೆಯೇ ಚಳಿಗಾಲದಲ್ಲಿ ಶಿರೋವಸ್ತ್ರಗಳಿಗೂ ಬೇಡಿಕೆ ಹೆಚ್ಚಾಗಿದೆ.
ಸ್ಕಾರ್ಫ್ ಬಳಸಿ
ಇತ್ತೀಚಿನ ದಿನಗಳಲ್ಲಿ ಹಲವು ಬಗೆಯ, ಡಿಸೈನ್‌ಗಳಲ್ಲಿ ಸ್ಕಾರ್ಫ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಉಲ್ಲನ್, ಕಾಟನ್, ನೆಟೆಡ್, ಜ್ಯೂಟ್, ಟೆರಿಕಾಟ್ ಸೇರಿದಂತೆ ಇನ್ನಿತರ ಬಟ್ಟೆಗಳಲ್ಲಿ ದೊರೆಯುತ್ತದೆ. ಪ್ರಿಂಟೆಡ್ ಸ್ಕಾರ್ಫ್ ಗೆ ಖರೀದಿ ಅಧಿಕ. ಚಳಿಗಾಲಕ್ಕೆ ಶ್ರಗ್ಸ್ ಗಳು ದೇಹ ಬೆಚ್ಚಗಿಡಲು ಸಹಕಾರಿ. ಡ್ರೆಸ್ ಮೇಲೆ ಶ್ರಗ್ಸ್ ಧರಿಸೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಸ್ಲಿವ್ ಲೆಸ್, ಟ್ಯಾಂಕ್ ಟಾಪ್, ಡ್ರೆಸ್, ಡೆನಿಮ್, ಪಲಾಝೋ ಪ್ಯಾಂಟ್ ಗಳಿಗೆ ಶ್ರಗ್ಸ್ ಹೊಂದಿಕೊಳ್ಳುತ್ತದೆ. ಈ ಋತುವಿನಲ್ಲಿ ಜನರು ಬೆಚ್ಚಗಿರಲು ಹೆಚ್ಚು ಬೆಚ್ಚಗಿನ ಬಟ್ಟೆಗಳನ್ನು ಧರಿಸುತ್ತಾರೆ. ರಾತ್ರಿ ಮಲಗುವಾಗಲೂ ಬೆಚ್ಚನೆಯ ಬಟ್ಟೆ ಹಾಕಿಕೊಂಡು ಮಲಗುವವರು ಬಹಳ ಮಂದಿ ಇದ್ದಾರೆ.
ಮಕ್ಕಳ ಟ್ರೆಂಡಿ ಉಡುಪುಗಳು
ಮಕ್ಕಳ ಸೌಂದರ್ಯದ ಕಡೆಗೂ ಹೆತ್ತವರು ಗಮನ ಹರಿಸುತ್ತಿದ್ದಾರೆ. ಚಳಿಗಾಲದಲ್ಲಿ ಮಕ್ಕಳ ಸೌಂದರ್ಯಕ್ಕೆ ಒಪ್ಪುವಂತಹ ಬಟ್ಟೆಗಳು ಕೂಡ ಮಾರುಕಟ್ಟೆಗೆ ಕಾಲಿರಿಸಿವೆ. ಗಂಡು ಮತ್ತು ಹೆಣ್ಣು ಮಕ್ಕಳ ಸ್ವೆಟ್ ಫ್ರಾಕ್ ಗಳಿಗೆ ಬೇಡಿಕೆ ಹೆಚ್ಚಿದ್ದು, ಉದ್ದನೆಯ ತೋಳು ಅಥವಾ ಸ್ವೆಟರ್ ಮಾದರಿಯ ಫ್ರಾಕ್ ಗಳು ಮಕ್ಕಳಿಗೆ ಚಳಿಯಿಂದ ರಕ್ಷಣೆ ನೀಡುತ್ತವೆ. ಬೇಸಿಗೆಯಲ್ಲಿ ತೆಳು ಬಣ್ಣದ ಬಟ್ಟೆ ಹಾಕಿಕೊಂಡರೆ ಚಳಿಗಾಲದಲ್ಲಿ ಕಡುವರ್ಣದ ಬಟ್ಟೆ ಸೂಕ್ತ. ಈ ಬಣ್ಣಗಳು ಸೂರ್ಯನ ಬಿಸಿಲನ್ನು ಬಹು ಬೇಗ ಹೀರಿಕೊಂಡು ದೇಹವನ್ನು ಬೆಚ್ಚಗಿಡಲು ಸಹಕರಿಸುತ್ತದೆ.