ಬೆಂಗಳೂರು(ಅ.31 ): ಚಳಿಗಾಲ ಬಂತೆಂದರೆ ಸಾಕು ಒಂಥರ ಖುಷಿ, ಇನ್ನೊಂದೆಡೆ ಅಬ್ಬಾ ಚಳಿ ಎಂಬ ಫೀಲಿಂಗ್ ಬೇರೆ. ಒಟ್ಟಾರೆಯಾಗಿ ಚಳಿಗಾಲ ಅಂದ್ರೆ ಚರ್ಮದ ಮುತುವರ್ಜಿ ವಹಿಸುವುದು ಮುಖ್ಯ. ಚಳಿಗೆ ಚರ್ಮದ ರಕ್ಷಣೆ ಮಾಡಿಕೊಳ್ಳುವುದು ಸಹ ನಮ್ಮೆಲ್ಲರ ಕರ್ತವ್ಯವಾಗಿದೆ. ಚಳಿಗಾಲದಲ್ಲಿ ಚರ್ಮದ ಆರೈಕೆಗೆ ವಿಶೇಷ ಗಮನ ಹರಿಸುವುದು ಅಗತ್ಯ. ಚಳಿಗೆ ಕೈಕಾಲುಗಳ ಚರ್ಮಗಳು ಬಿರುಕು ಬಿಟ್ಟುಕೊಂಡು ಒಡೆದು ಹೋಗಿ ರಕ್ತ (Blood) ಸೋರುವುದು, ನಡೆಯಲು ನೋವಾಗುವುದು, ತುಟಿ ಒಡೆಯುವುದು,ಮೈ ಕೈ ಬಿಳಿಚಿಕೊಳ್ಳುವುದು ಇತ್ಯಾದಿ ಸಮಸ್ಯೆ ಕಂಡುಬರುತ್ತವೆ.
ಬಾದಾಮಿ ಸೇವಿಸುವುದು
ಬಾದಾಮಿ ಬೀಜಗಳಲ್ಲಿ ಕೇವಲ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಮಾತ್ರ ಹೆಚ್ಚಾಗಿರದೆ, ಆಂಟಿ – ಆಕ್ಸಿಡೆಂಟ್ ಅಂಶಗಳು ಸಹ ಬಹಳಷ್ಟು ಕಂಡು ಬರುತ್ತವೆ. ಹಾಗಾಗಿ ದೇಹದಲ್ಲಿ ಫ್ರೀ – ರಾಡಿಕಲ್ ಗಳ ಹಾನಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಮತ್ತು ಚಳಿಗಾಲದ ಸಂದರ್ಭದಲ್ಲಿ ಚರ್ಮದ ಸೌಂದರ್ಯ ಮತ್ತು ಹೊಳಪನ್ನು ಕಾಪಾಡಿಕೊಳ್ಳಲು ಪ್ರತಿ ದಿನ ರಾತ್ರಿಯ ಸಮಯದಲ್ಲಿ ನೀರಿನಲ್ಲಿ ನೆನೆ, ಬೀಜಗಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿಗೆ ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
ಕ್ಯಾರೆಟ್ ಸೇವಿಸುವ ಅಭ್ಯಾಸ
ಕ್ಯಾರೆಟ್ ನಲ್ಲಿ ಬೀಟಾ-ಕ್ಯಾರೋಟಿನ್ ಎಂಬ ಅಂಶವಿರುವ ಕಾರಣ ನಮ್ಮ ಚರ್ಮದ ಆರೋಗ್ಯಕ್ಕೆ ಇದು ಹೆಚ್ಚು ಸೂಕ್ತ. ನಾವು ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ನಮ್ಮ ಚರ್ಮವನ್ನು ಸೂರ್ಯನ ಅತಿ ನೇರಳೆ ಕಿರಣಗಳಿಂದ ರಕ್ಷಣೆ ಮಾಡಿಕೊಳ್ಳಲು ಇದು ನೆರವಾಗುತ್ತದೆ. ನೀವು ಕ್ಯಾರೆಟ್ ಅನ್ನು ದಿನ ನಿತ್ಯ ಬೇಯಿಸಿದ ತರಕಾರಿಯಾಗಿ ಸೇವನೆ ಮಾಡಬಹುದು, ಜ್ಯೂಸ್ ತಯಾರು ಮಾಡಿ ಕುಡಿಯಬಹುದು ಅಥವಾ ತರಕಾರಿಗಳ ಸಲಾಡ್ ತಯಾರು ಮಾಡಿಕೊಂಡು ತಿನ್ನಬಹುದು. ನಮ್ಮ ಚರ್ಮದ ಹೊಳಪಿಗೆ ಮತ್ತು ನಮ್ಮ ಚರ್ಮಕ್ಕೆ ಕೆಂಪುಬಣ್ಣದ ಸೌಂದರ್ಯ ಕಂಡು ಬರಲು ನಿತ್ಯ ನಿಯಮಿತವಾಗಿ ಕ್ಯಾರೆಟ್ ಸೇವನೆ ಮಾಡಿದರೆ ಉತ್ತಮ.
ನೀರು ಕುಡಿಯುವುದು
ನಮ್ಮ ದೇಹಕ್ಕೆ ನೀರು ಅತ್ಯಮೂಲ್ಯ. ದೇಹಕ್ಕೆ ಎಷ್ಟು ನೀರಿನ ಅಂಶ ಬೇಕೋ ಅಷ್ಟು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಉತ್ತಮ. ನಿಮಗೆಲ್ಲಾ ಗೊತ್ತಿರುವ ಹಾಗೆ ನಮ್ಮ ದೇಹ ಸುಮಾರು 70 ರಷ್ಟು ಭಾಗ ನೀರಿನಿಂದಲೇ ತುಂಬಿಕೊಂಡಿದೆ. ಆದರೆ ಚಳಿಗಾಲದ ಈ ಸಮಯದಲ್ಲಿ ನಮ್ಮ ದೇಹದಿಂದ ಸಾಕಷ್ಟು ನೀರಿನ ಪ್ರಮಾಣ ಸುತ್ತಲಿನ ತಂಪಾದ ಗಾಳಿಯ ವಾತಾವರಣದಲ್ಲಿ ಆವಿಯಾಗಿ ಹೋಗುತ್ತದೆ. ಹಾಗಾಗಿ ಬೇಸಿಗೆ ಕಾಲ ಇರಲಿ ಅಥವಾ ಮಳೆಗಾಲ ಇರಲಿ ಅಥವಾ ಚಳಿಗಾಲ ಇರಲಿ ನಮ್ಮ ದೇಹವನ್ನು ಯಾವುದೇ ಕಾರಣಕ್ಕೂ ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ನಾವು ಆರೋಗ್ಯವಾಗಿ ಇರಬೇಕಾದರೆ ಪ್ರತಿ ದಿನ 3 ರಿಂದ 4 ಲೀಟರ್ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರ ಜೊತೆಗೆ ಕಿತ್ತಳೆ ಹಣ್ಣಿನ ರಸ, ಕಲ್ಲಂಗಡಿ ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್, ಗ್ರೀನ್ ಟೀ ಇತ್ಯಾದಿಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.
ತೆಂಗಿನ ಹಾಲಿನ ಮಾಸ್ಕ್
ತೆಂಗಿನಕಾಯಿ ತುರಿದು ರುಬ್ಬಿ ರಸ ತೆಗೆಯಿರಿ. ರಸವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮುಖಕ್ಕೆ ಹೊಳಪು ಬರುತ್ತದೆ. ಟೊಮ್ಯಾಟೋ ಮೊಸರಿನ ಪ್ಯಾಕ್: ಟೊಮ್ಯಾಟೋವನ್ನು ಚೆನ್ನಾಗಿ ಪೇಸ್ಟ್ ಮಾಡಿ ಮೊಸರಿನೊಂದಿಗೆ ಮಿಶ್ರಣ ಮಾಡಿ ಒಂದೆರಡು ಹನಿ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಚಳಿಗಾಲದಲ್ಲಿ ಕಾಲು ಒಡೆಯುವುದು ಸಾಮಾನ್ಯ. ಇದಕ್ಕೆ ಪ್ರತಿನಿತ್ಯ ರಾತ್ರಿ ಎಳ್ಳೆಣ್ಣೆಯನ್ನು ಮಲಗುವ ಮುಂಚೆ ಹಚ್ಚುವುದರಿಂದ ಕಾಲು ಒಡೆಯುವುದನ್ನು ತಡೆಯಬಹುದು. ಜೊತೆಗೆ ದೇಹಕ್ಕೂ ಇದು ತಂಪು.
ಇದನ್ನೂ ಓದಿ: 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, 67 ಜನರ ಪಟ್ಟಿ ಇಲ್ಲಿದೆ ಓದಿ