Varamahalakshmi Festival: (ಆ. 05): ವರಮಹಾಲಕ್ಷ್ಮಿ ಹಬ್ಬ ಅಂದ್ರೆ ಪ್ರಮುಖವಾಗಿ ಎಲ್ಲಾ ಮಹಿಳೆಯರಿಗೆ ಬಹಳ ವಿಶೇಷವಾದ ಹಬ್ಬ. ಈ ದಿನ ದೇವಿಗೆ ಚಂದವಾಗಿ ಅಲಂಕಾರ ಮಾಡಿ ದೇವಿಯ ಆಶೀರ್ವಾದ ಪಡೆಯುವ ಮಹತ್ತರವಾದ ದಿನವಾಗಿದೆ. ಹಿಂದೂ ಪುರಾಣಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಬಗೆಗೆ ಇರುವ ಉಲ್ಲೇಖಗಳು ಹಲವಾರು ನಂಬಿಕೆಗಳನ್ನು ಹುಟ್ಟಿಸಿವೆ.
ಈ ದಿನ ಹೆಣ್ಣು ಮಕ್ಕಳಿಗೆ ವಿಶೇಷ ಹಬ್ಬ. ಮನೆಯಲ್ಲಿ ತಿಂಡಿ, ತಿನಸುಗಳನ್ನು ತಯಾರಿ ಪ್ರೀಯವಾದ ದೇವಿಗೆ ಅರ್ಪಿಸೋ ದಿನವೂ ಹೌದು. ಮನೆಮಂದಿಯೆಲ್ಲ ಕುಳಿತುಕೊಂಡು ಒಟ್ಟಿಗೆ ಊಟ ಸವಿಯೋದು ಕೂಡ ಮಜವಾಗಿರುತ್ತದೆ. ಹಾಗಾದರೆ, ಈ ದಿನ ಏನೆಲ್ಲಾ ತಿನಸುಗಳನ್ನು ಮಾಡಬಹುದು? ಹೇಗೆ ತಯಾರಿಸಹುದು ನೋಡೋಣ.
ಹೇಗೆ ಮಾಡೋದು?
ಲಕ್ಷ್ಮೀ ದೇವಿಗೆ ಕಡಲೆಬೇಳೆಯ ತಿನಸುಗಳೆಂದರೆ ಬಹುಇಷ್ಟ. ಇದರಿಂದ ಕಡಲೆಬೇಳೆ ಪಾಯಸ ಮಾಡಿ, ಸವಿಯೋದು ಈ ದಿನ ಚೆನ್ನಾಗಿರುತ್ತೆ. ಕಡಲೆಬೇಳೆ ಪಾಯಸದಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಮಿಶ್ರಣ ಇರೋದ್ರಿಂದ ಆರೋಗ್ಯಕ್ಕೂ ಒಳ್ಳೆಯದು. ತೆಂಗಿನಕಾಯಿ ಮತ್ತು ಬೆಲ್ಲದ ಖಾದ್ಯಗಳು ಹೆಚ್ಚು ಸ್ವಾದವಾಗಿಯೂ ಇರುತ್ತೆ. ಹಬ್ಬದಂದು ಈ ರೆಸಿಪಿಗೆ ಹೆಚ್ಚು ಡಿಮ್ಯಾಂಡ್. ಊಟದ ಬಳಿಕ ಸೇವಿಸಿದರೆ ನಿದ್ರೆಯೂ ಚೆನ್ನಾಗಿ ಆಗುತ್ತೆ. ಕಡಲೆಬೇಳೆಯನ್ನು ಅರ್ಧಗಂಟೆಗಳ ಕಾಲ ನೆನೆಸಿಡಬೇಕು. ನಂತರ 1 ಕುಕ್ಕರ್ನಲ್ಲಿ 4 ಗ್ಲಾಸ್ ನೀರು ತೆಗೆದುಕೊಂಡು 2 ವಿಷಲ್ ಕೂಗಿಸಿಕೊಳ್ಳಬೇಕು. ಬೇಯಿಸುವಾಗ ಅರ್ಧ ಚಮಚ ತುಪ್ಪ ಸೇರಿಸಿ. ಮತ್ತೊಮ್ಮೆ ಕಡಲೆಬೇಳೆ ಬೆಂದಿದ್ಯಾ ಅಂತಾ ನೋಡಿಕೊಳ್ಳಿ. ಕಡಲೆಬೇಳೆ ಬೆಂದ ಬಳಿಕ ನಂತರ ದೊಡ್ಡ ಪಾತ್ರೆಗೆ ಕಡಲೆಬೇಳೆಯನ್ನು ಹಾಕಿ ಅದಕ್ಕೆ ಬೆಲ್ಲ ಹಾಕಬೇಕು.
ಬೆಲ್ಲ ಕರಗೋವರೆಗೆ ಚೆನ್ನಾಗಿ ಕುದಿಸಿ. ಬೆಲ್ಲವನ್ನು ಮೊದಲೇ ನೀರು ಹಾಕಿ ಇಟ್ಟುಕೊಂಡರೆ ಇನ್ನೂ ಒಳ್ಳೆಯದು. ಬೆಲ್ಲ ಹಾಕಿದ ಮೇಲೆ ಕಡಲೆಬೇಳೆ ಬೇಯೋದಕ್ಕೆ ಹೆಚ್ಚು ಸಮಯ ಹಿಡಿಯುತ್ತೆ. ಈಗ ಮುಕ್ಕಾಲುಗಂಟೆ ನೆನೆಸಿ ಇಟ್ಟುಕೊಂಡ ದೋಸೆ ಅಕ್ಕಿ ಮತ್ತು ತೆಂಗಿನಕಾಯಿಯನ್ನು ಮಿಕ್ಸಿಗೆ ಹಾಕಿ ರುಬ್ಬಬೇಕು. ಹದಕ್ಕೆ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ನುಣ್ಣಗೆ ರುಬ್ಬಬೇಕು. ನಂತರ ಮಿಕ್ಸಿಯಲ್ಲಿ ರುಬ್ಬಿದ ಹಾಲನ್ನು ಶುಭ್ರವಾದ ಒಂದು ಬಟ್ಟೆಯಲ್ಲಿ ಸೋಸಿಕೊಳ್ಳಬೇಕು. ಉಳಿದ ನೀರನ್ನು ಕೂಡ ಚೆನ್ನಾಗಿ ಬಳಸಿ ಸೋಸಿಕೊಳ್ಳಿ. ನಂತರ ಕುದಿಯುತ್ತಿರೋ ಕಡಲೆಬೇಳೆ ಪಾಕಕ್ಕೆ ಸೋಸಿಕೊಂಡ ಹಾಲನ್ನು ಹಾಕಬೇಕು. ಎಲ್ಲವನ್ನೂ ಸೇರಿಸಿಕೊಂಡು ನಂತರ ಒಂದೆರಡು ಕುದಿ ಬರೋವರೆಗೆ ಕುದಿಸಬೇಕು. ಈ ವೇಳೆ ಕೊಂಚ ನೀರನ್ನು ಕೂಡ ಸೇರಿಸಿಕೊಳ್ಳಬಹುದು. ಈಗ ಒಂದು ಬಾಣಲೆಗೆ ತುಪ್ಪ ಹಾಕಿ ಗೋಡಂಬಿಯನ್ನು ಕೆಂಪಾಗಿ ಹುರಿದುಕೊಳ್ಳಿ. ಅದನ್ನು ಪಾಯಸಕ್ಕೆ ಸೇರಿಸಿ. ನಂತರ ಒಣದ್ರಾಕ್ಷಿಯನ್ನು ಹುರಿದುಕೊಂಡು ಅದನ್ನೂ ಪಾಯಸಕ್ಕೆ ಸೇರಿಸಿ. ಈಗ ವರಮಹಾಲಕ್ಷ್ಮೀ ಹಬ್ಬಕ್ಕೆ ಘಮಘಮವಾದ ಕಡಲೆಬೇಳೆ ಪಾಯಸ ರೆಡಿ.