
‘Sorry’ Karma Returns: (ಜು.12):ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿರುವ “ಸಾರಿ” ಕರ್ಮ ರಿಟರ್ನ್ಸ್ ಚಿತ್ರದ ಲಿರಿಕಲ್ ಸಾಂಗ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ನಾನು ಮೂಲತಃ ವಿ.ಎಫ್.ಎಕ್ಸ್ ತಂತ್ರಜ್ಞ. ಈ ಹಿಂದೆ “ಸಿದ್ದಿಸೀರೆ” ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ.ಇದು ಸೂಪರ್ ಹೀರೊ ಕಾನ್ಸೆಪ್ಟ್ ನ ಚಿತ್ರ. ರಾಗಿಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕನ್ನಡದ ಮೊದಲ ಸೂಪರ್ ಹೀರೊ ಕಾನ್ಸೆಪ್ಟ್ ನ ಚಿತ್ರ ಎನ್ನಬಹುದು. ಈ ಹಿಂದೆ ಕೆಲವು ಚಿತ್ರ ಬಂದಿದೆ ಎನ್ನುತ್ತಾರೆ. ಆದರೆ ಮೋಷನ್ ಕ್ಯಾಪ್ಚರ್ ಎಂಬ ವಿಶೇಷ ತಂತ್ರಜ್ಞಾನ ಬಳಿಸಿ ನಿರ್ಮಾಣ ಮಾಡುತ್ತಿರುವ ಮೊದಲ ಸೂಪರ್ ಹೀರೊ ಕಾನ್ಸೆಪ್ಟ್ ನ ಕನ್ನಡ ಚಿತ್ರವಿದು. ಆ ಕುರಿತು ಈಗಾಗಲೇ ಮೇಕಿಂಗ್ ವಿಡಿಯೋ ಸಹ ಬಿಡುಗಡೆ ಮಾಡಿದ್ದೇವೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ದೇಶಕ ಬ್ರಹ್ಮ ಮಾಹಿತಿ ನೀಡಿದರು.
ನಾನು ಚಿತ್ರರಂಗಕ್ಕೆ ಬಂದು ಹನ್ನೊಂದು ವರ್ಷಗಳಾಯಿತು. ಈತನಕ ಹೊಸತು ಎನಿಸಿದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದೀನಿ. ಕಲಾವಿದರು ಸ್ವಲ್ಪ ರಿಸ್ಕ್ ಆದರೂ ಪರವಾಗಿಲ್ಲ, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ಅನಿಸಿಕೆ. ನಾನು ಆ ರೀತಿ ಮಾಡಿಕೊಂಡು ಬರುತ್ತಿದ್ದೇನೆ. ನನಗೆ ಮೊದಲಿನಿಂದಲೂ ಸೂಪರ್ ಹೀರೊ ಅಂದರೆ ಇಷ್ಟ. ಈಗ ಅದೇ ಪಾತ್ರ ನನಗೆ ಸಿಕ್ಕಿರುವುದು ಖುಷಿಯಾಗಿದೆ. ನಿರ್ದೇಶಕ ಬ್ರಹ್ಮ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯ ಹಾಗೂ ಅರ್ಜುನ್ ಶರ್ಮ ಸೇರಿದಂತೆ ಎಲ್ಲಾ ಸಹನಟರ ಅಭಿನಯ ಚೆನ್ನಾಗಿದೆ ಎಂದರು ರಾಗಿಣಿ ದ್ವಿವೇದಿ.
ನಾನು ಈ ತನಕ ಐದಾರು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು. ರಾಗಿಣಿ ಅವರ ಜೊತೆ ಅಭಿನಯಿಸಿದ್ದು ಸಂತಸವಾಗಿದೆ ಎಂದರು ನಟ ಅರ್ಜುನ್ ಶರ್ಮ.ಚಿತ್ರದಲ್ಲಿ ನಟಿಸಿರುವ ಅಫ್ಜಲ್, ಸಂಗೀತ ನೀಡಿರುವ ರಾಜು ಎಮ್ಮಿಗನೂರು, ಛಾಯಾಗ್ರಾಹಕ ರಾಜೀವ್ “ಸಾರಿ” ಬಗ್ಗೆ ಮಾತನಾಡಿದರು.ನವೀನ್ ಕುಮಾರ್ ಈ ಚಿತ್ರದ ನಿರ್ಮಾಪಕರು . ಜೈ ಕೃಪ್ಲಾನಿ ಹಾಗೂ ಜೇನ್ ಜಾರ್ಜ್ ಸಹ ನಿರ್ಮಾಪಕರು. ಅಫ್ಜಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ARERE OLAGOLAGE Lyrical Video| Sorry Karma Returns | Ragini Dwivedi| Raju Emmiganur |Brahma|A2 Music