ಮೋದಿ ಮೌನ ದೇಶಕ್ಕೆ ಹಾನಿಕಾರಕ
ಚೀನಾದ (China) ಅತಿಕ್ರಮಣ (India-China border issue) ಮತ್ತು ಅದರ ಬಗೆಗಿನ ಪ್ರಧಾನಿಯವರ (PM Narendra Modi) ಮೌನವು (silence) ದೇಶಕ್ಕೆ ಅತ್ಯಂತ ಹಾನಿಕಾರಕ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ(Rahul Gandhi), ಮೋದಿ (PM Narendra Modi) ಅವರ ಐದು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಮೋದಿ (PM Narendra Modi) ಅವರು ಚೀನಾಕ್ಕೆ (China) ಹೆದರುತ್ತಾರೆ. ಸಾರ್ವಜನಿಕರಿಂದ ಸತ್ಯವನ್ನು ಮರೆಮಾಚುತ್ತಾರೆ. ಕೇವಲ ತಮ್ಮ ಇಮೇಜ್ (Emage) ರಕ್ಷಿಸಿಕೊಳ್ಳುತ್ತಾರೆ. ಸೇನೆಯ ನೈತಿಕತೆಯನ್ನು ಕುಗ್ಗಿಸುತ್ತಿದ್ದಾರೆ. ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ (Congress Leader Rahul Gandhi) ಆರೋಪಿಸಿದ್ದಾರೆ.
ಸೆ.5ಕ್ಕೆ ಬ್ರಿಟನ್ ಹೊಸ ಪ್ರಧಾನಿ ಘೋಷಣೆ
ಬ್ರಿಟನ್‌ನ ಪ್ರಧಾನ ಮಂತ್ರಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ ಘೋಷಿಸಿರುವ ಬೆನ್ನಲ್ಲೇ ಹೊಸ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆ ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ ಹೊಸ ಪ್ರಧಾನಿ ಯಾರು ಎಂದು ಸೆಪ್ಟೆಂಬರ್ 5ರಂದು ಘೋಷಣೆಯಾಗಲಿದೆ. ಪ್ರಧಾನಿ ಸ್ಪರ್ಧೆಯಲ್ಲಿ ಒಂಬತ್ತು ಅಭ್ಯರ್ಥಿಗಳ ಹೆಸರು ಕೇಳಿಬಂದಿದ್ದು, ಮಾಜಿ ಸಚಿವ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನದ ಜೊತೆಗೆ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲೂ ಮುಂಚೂಣಿಯಲ್ಲಿದ್ದಾರೆ.
ದ್ರೌಪದಿ ಮುರ್ಮುಗೆ ಟಿಡಿಪಿ ಬೆಂಬಲ
ಬಿಜೆಪಿ ನೇತೃತ್ವದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ತೆಲುಗು ದೇಶಂ ಪಕ್ಷ (ಟಿಡಿಪಿ) ಘೋಷಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರು, ಟಿಡಿಪಿ ಯಾವಾಗಲೂ ಸಾಮಾಜಿಕ ನ್ಯಾಯದ ಪರ ನಿಲ್ಲುತ್ತದೆ. ಈ ಹಿಂದೆ ಕೆ.ಆರ್.ನಾರಾಯಣನ್ ಮತ್ತು ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಬೆಂಬಲ ನೀಡಿತ್ತು. ಅದೇ ರೀತಿ ಈ ಬಾರಿ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಸ್ಪರ್ಧಿಸಿರುವ ಆದಿವಾಸಿ ಮಹಿಳೆ, ದ್ರೌಪದಿ ಮುರ್ಮು ಅವರನ್ನು ಪಕ್ಷವು ಬೆಂಬಲಿಸಲಿದೆ ಎಂದು ತಿಳಿಸಿದ್ದಾರೆ.
ಶಾಸಕರ ಅನರ್ಹತೆ ಪ್ರಕ್ರಿಯೆಗೆ ಸುಪ್ರೀಂ ತಡೆ
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದಲ್ಲಿರುವ ಶಿವಸೇನಾದ ಶಾಸಕರ ಅನರ್ಹತೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ಮುಂದುವರಿಸಬಾರದು ಎಂದು ಮಹಾರಾಷ್ಟ್ರದ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಉದ್ಧವ್ ಠಾಕ್ರೆ ಬಣದ ಮನವಿಗಳನ್ನು ಪಟ್ಟಿ ಮಾಡಲಾಗುವುದು. ನ್ಯಾಯಾಲಯದಲ್ಲಿ ಈ ವಿಚಾರ ಇತ್ಯರ್ಥವಾಗುವವರೆಗೆ ಅನರ್ಹತೆ ಪ್ರಕ್ರಿಯೆ ನಡೆಸಬಾರದು ಎಂದು ಕಪಿಲ್ ಸಿಬಲ್ ನೇತೃತ್ವದ ಹಿರಿಯ ವಕಿಲರ ತಂಡ ಮನವಿ ಮಾಡಿದೆ. ಅಲ್ಲದೆ, ಬಂಡಾಯ ಶಾಸಕರ ಅನರ್ಹಗೊಳಿಸುವಂತೆ ಈ ಹಿಂದೆ ಅರ್ಜಿಗಳು ಸಲ್ಲಿಕೆಯಾಗಿದ್ದಾಗ ಅವರನ್ನು ನ್ಯಾಯಾಲಯ ರಕ್ಷಿಸಿದೆ ಎಂದು ಹೇಳಿದ್ದಾರೆ.
ಜುಬೈರ್‌ಗೆ 14 ದಿನಗಳ ನ್ಯಾಯಾಂಗ ಬಂಧನ
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಯುಪಿಯ ಮೊಹಮ್ಮದಿ ಸೆಷನ್ಸ್ ನ್ಯಾಯಾಲಯ ಹಳೇ ಪ್ರಕರಣವೊಂದರಲ್ಲಿ ಈ ಆದೇಶ ನೀಡಿದೆ. ಕೋಮು ದ್ವೇಷ ಹರಡುವ ಪೋಸ್ಟ್ ಹಾಕಿದ ಆರೋಪದಡಿ 2021ರ ಸೆಪ್ಟೆಂಬರ್‌ನಲ್ಲಿ ಈತನ ಫ್ಯಾಕ್ಟ್ ಚೆಕ್ ಕಂಪೆನಿ ಉದ್ಯೋಗಿಯೊಬ್ಬರು ದೂರು ನೀಡಿದ್ದರು. ಈ ಸಂಬಂಧ ಲಿಖಿಂಪುರ ಖೇರ್ ಪೊಲೀಸರು ಜುಬೇರ್‌ಗೆ ವಾರೆಂಟ್ ನೀಡಿದ್ದರು. ಇದರ ಬಗ್ಗೆ ವಿಚಾರಣೆ ನಡೆದಿತ್ತು. ಸದ್ಯ ಜುಬೇರ್ ಸೀತಾಪುರ ಜೈಲಿನಲ್ಲಿದ್ದಾನೆ.
ನ್ಯಾಯಾಲಯದಲ್ಲಿ 5 ಕೋಟಿ ಪ್ರಕರಣ ಬಾಕಿ
ದೇಶದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಕಳವಳ ವ್ಯಕ್ತಪಡಿಸಿದ್ದಾರೆ. ‘ದೇಶದ ನ್ಯಾಯಾಲಯಗಳಲ್ಲಿ ಸುಮಾರು 5 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ’ ಎಂಬ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ‘ನ್ಯಾಯ ವಿತರಣೆಯಲ್ಲಿ ಯಾವುದೇ ಲೋಪ ಅಥವಾ ಸರ್ಕಾರದ ಬೆಂಬಲದ ಕೊರತೆಯಿಂದಾಗಿ ಈ ಪರಿಸ್ಥಿತಿ ಬಂದಿಲ್ಲ’ ಎಂದಿರುವ ರಿಜಿಜು, ‘ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆ ; ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು
ಬೆಂಗಳೂರುಗೆ ಕುಡಿಯುವ ನೀರಿಗಾಗಿ ಜಾರಿ ಮಾಡಬೇಕೆಂದಿರುವ ಮೇಕೆದಾಟು ಯೋಜನೆ ವಿರೋಧಿಸಿ ಮತ್ತೆ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈಗಾಗಲೇ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ರನ್ನು ಭೇಟಿ ಮಾಡಿರುವ ಸಿಎಂ ಬೊಮ್ಮಾಯಿ, ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ವಿಷಯದ ಬಗ್ಗೆ ಚರ್ಚೆ ಮಾಡಿ ಒಪ್ಪಿಗೆ ನೀಡಿ ಎಂದು ಕೇಳಿಕೊಂಡಿದ್ದು, ಸಭೆಯಲ್ಲಿ ಡಿಪಿಆರ್ ಚರ್ಚೆಗೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ. ಅದಕ್ಕೆ ಈಗ ತಮಿಳುನಾಡು, ಯೋಜನೆ ವಿರೋಧಿಸಿ ಮತ್ತೆ ಸುಪ್ರೀಂ ಮೊರೆ ಹೋಗಿದೆ.
ಎಐಎಡಿಎಂಕೆ ನಡವಳಿಕೆ ಬಗ್ಗೆ ಚಿನ್ನಮ್ಮ ಬೇಸರ
ಎಐಎಡಿಎಂಕೆ ಸಾಮಾನ್ಯ ಸಭೆಯನ್ನು ಸ್ವಾರ್ಥಕ್ಕಾಗಿ ಮಾಡಿದ್ದಾರೆಂದು ತಮಿಳುನಾಡಿನ ಚಿನ್ನಮ್ಮ ಶಶಿಕಲಾ ಆರೋಪಿಸಿದ್ದಾರೆ. ಸೋಮವಾರ ನಡೆದ ಸಭೆಗೆ ಮಾನ್ಯತೆ ಇಲ್ಲ. ನನ್ನ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ಬಾಕಿ ಇರುವಾಗ ಇಂತಹ ಸಭೆಗಳು ನಡೆಯಬಾರದು. ಡಿಎಂಕೆಯಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದಕ್ಕೆ ಎಂಜಿಆರ್ ಪ್ರತ್ಯೇಕ ಪಕ್ಷ ಕಟ್ಟಿ, ಅಂತಹ ಪರಿಸ್ಥಿತಿ ಪಕ್ಷದಲ್ಲಿ ಯಾರಿಗೂ ಬರಬಾರದು ಎಂದಿದ್ದರು. ಆದರೆ ಅವರ ಹಾದಿಯಲ್ಲಿ ಇಂದು ಪಕ್ಷ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಕಮಲದಿಂದಲೇ ಬಿಜೆಪಿ ಸರ್ಕಾರ
ಉತ್ತರ ಪ್ರದೇಶ ಹೊರತುಪಡಿಸಿದರೆ ಹಲವು ರಾಜ್ಯಗಳಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿಯೇ ಸರ್ಕಾರ ನಡೆಸುತ್ತಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿರುವ ಸರ್ಕಾರಗಳಲ್ಲಿ ಶೇ.25ರಷ್ಟು ಮೂಲ ಬಿಜೆಪಿ ಶಾಸಕರಿದ್ದಾರೆ ಎಂದು ಹೇಳಿದ್ದಾರೆ. ಅದರಲ್ಲೂ ಬಿಹಾರ, ಕರ್ನಾಟಕ, ಮಹಾರಾಷ್ಟ್ರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಎಷ್ಟು ಜನ ಬಿಜೆಪಿಯ ಶಾಸಕರಿದ್ದಾರೆ ಎಂಬುದನ್ನು ಲೆಕ್ಕ ಹಾಕಲಿ ಎಂದು ಸವಾಲ್ ಹಾಕಿದ್ದಾರೆ.
ಇಂದು ಶಿವರಾಜ್ ಕುಮಾರ್ ಜನ್ಮದಿನ
ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. 60ನೇ ವರ್ಷದ ಸಂಭ್ರಮದಲ್ಲಿರುವ ಶಿವಣ್ಣ ಕನ್ನಡ ಸಿನಿಮಾ ಇಂಡಸ್ಟ್ರಿ ಪಾಲಿಗೆ ಅನರ್ಘ್ಯ ರತ್ನ. 1986ರಲ್ಲಿ ಆನಂದ್ ಸಿನಿಮಾ ಮೂಲಕ ನಾಯಕನಟನಾಗಿ ಕಾಣಿಸಿಕೊಂಡ ಶಿವಣ್ಣನ 123 ಸಿನಿಮಾಗಳು ತೆರೆಕಂಡಿವೆ. ಇನ್ನಷ್ಟು ಸಿನಿಮಾಗಳು ಕೈಯಲ್ಲಿವೆ. ಸರಳತೆ ಮತ್ತು ವಿನಯತೆ ಶಿವಣ್ಣನ ಟ್ರೇಡ್ ಮಾರ್ಕ್. ಈ ಬಾರಿಯೂ ಕುಟುಂಬದ ಜೊತೆ ಸರಳವಾಗಿ ಹುಟ್ಟು ಹಬ್ಬ ಆಚರಿಸಲು ಶಿವಣ್ಣ ನಿರ್ಧಾರ ಮಾಡಿದ್ದಾರೆ.