ಬೆಂಗಳೂರು:(ಜು.11): Bangalore Crime: ಕೊಟ್ಟಿರುವ ಸಾಲ ಕೇಳಿದ ಅಂತಾ ಎಣ್ಣೆ ಏಟಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ತಳ್ಳಿ ಕೊಲೆ ಮಾಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ನಡೆದಿರೋ ಜಗಳದಲ್ಲಿ ಸುಬ್ರಮಣಿ ಎಂಬಾತನನ್ನ ಸ್ನೇಹಿತರಾದ ನಾಗರಾಜ್ ಮತ್ತು ವಸಂತ್ ಎಂಬುವರು ಕೊಲೆ ಮಾಡಿದ್ದಾರೆ.
ಘಟನೆ ವಿವರ
ಕೊಲೆಯಾದ ಸುಬ್ರಮಣಿ ಮತ್ತು ಆರೋಪಿಗಳಾದ ನಾಗರಾಜ್ ಮತ್ತು ವಸಂತ್ ಕಳೆದ ಹತ್ತಾರು ವರ್ಷಗಳಿಂದಲೂ ಗೆಳೆಯರಾಗಿದ್ದರು. ಮೂವರೂ ವೃತ್ತಿಯಲ್ಲಿ ಟೈಲರ್ ಗಳಾಗಿದ್ದರು. ಒಂದೇ ಏರಿಯಾದಲ್ಲಿ ಈ ಮೂವರು ಫ್ರೆಂಡ್ಸ್ ಆಗಾಗ ಎಣ್ಣೆ ಪಾರ್ಟಿ ಮಾಡುತ್ತಿದ್ದರು.
ನಿನ್ನೆ ಕೂಡ ಹತ್ತಿರದಲ್ಲಿರುವ ಬಾರ್ ಗೆ ಹೋಗಿದ್ದರು. ಸುಬ್ರಮಣಿ ಬಳಿ ಆರೋಪಿ ನಾಗರಾಜ್ 20 ಸಾವಿರ ಸಾಲ ಮಾಡಿದ್ದನು. 10 ಸಾವಿರ ಕೊಟ್ಟಿದ್ದೋನು ಇನ್ನೂ ಹತ್ತು ಸಾವಿರ ಕೊಡೋದು ಬ್ಯಾಲೆನ್ಸ್ ಇಟ್ಕೊಂಡಿದ್ದನು. ನಿನ್ನೆ ಎಣ್ಣೆ ಪಾರ್ಟಿಗೆ ಅಂತಾ ರಾತ್ರಿ 8ರ ಸುಮಾರಿಗೆ ಹೋಗಿ ಬಾರ್ ನಲ್ಲಿ ಎಣ್ಣೆ ಹೊಡೆದು ಬಂದಿದ್ದಾರೆ. ಬಳಿಕ ನಾಗರಾಜ್ ಟೈಲರ್ ಶಾಪ್ ಮುಂದೆ ಬಂದು ಮಾತನಾಡಿಕೊಂಡು ನಿಂತೋರ ಮಧ್ಯೆ ಸಾಲದ ವಿಚಾರ ಬಂದಿದೆ.
ಈ ವೇಳೆ ನಾನು ಕೊಟ್ಟಿದ್ದ ಹತ್ತು ಸಾವಿರ ಕೊಡು. ಎಷ್ಟು ದಿನ ಆಯ್ತು ಯಾವಾಗ ಕೊಡ್ತೀಯಾ ಅಂತಾ ಸುಬ್ರಮಣಿ ನಾಗರಾಜ್ ಗೆ ಕೇಳಿದ್ದಾನೆ. ಈ ವೇಳೆ ಕೊಡಲ್ಲ ಏನು ಮಾಡುತ್ತೀಯಾ ಮಾಡ್ಕೋ ಅಂತಾ ನಾಗರಾಜ್ ಹೇಳಿದ್ದಾನೆ.ಮೊದಲೇ ನಶೆಯ ಗುಂಗಿನಲ್ಲಿದ್ದ ಸುಬ್ರಮಣಿ ನನ್ನ ಹಣ ನನಗೆ ಕೊಡು ಅಂತಾ ಒಂದೇಟು ಹೊಡೆದಿದ್ದಾನೆ. ತಾನೂ ಎಣ್ಣೆಯಿಂದ ಟೈಟಾಗಿದ್ದ ನಾಗರಾಜ್ ನನ್ನ ಅಂಗಡಿ ಮುಂದೆ ನನ್ನೇ ಹೊಡೀತಿಯಾ ಅಂತಾ ಸುಬ್ರಮಣಿಯನ್ನ ಜೋರಾಗಿ ತಳ್ಳಿದ್ದಾನೆ. ಪರಿಣಾಮ ಉರುಳಿ ಬಿದ್ದ ಸುಬ್ರಮಣಿ ರಕ್ತಸ್ರಾವವಾಗಿ ಆಸ್ಪತ್ರೆಗೆ ಸೇರಿಸೋಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.