ಚೆನ್ನೈ : (ಜುಲೈ 11) : AIADMKಯಿಂದ ಮಾಜಿ ಸಿಎಂ ಪನ್ನೀರ್ ಸೆಲ್ವಂ ಔಟ್ ಆಗಿದ್ದು, ಮಾಜಿ ಸಿಎಂ ಪಳನಿಸ್ವಾಮಿ ಅವರು AIADMK ಪ್ರಧಾನ ಕಾರ್ಯದರ್ಶಿ ಚುಕ್ಕಾಣಿ ಹಿಡಿದ್ದಾರೆ. ಇದು ತಮಿಳುನಾಡು ಅಕ್ಷರಶಃ ರಣರಂಗಕ್ಕೆ ಕಾರಣವಾಗಿದೆ.

ಹೌದು, (AIADMK) ಜನರಲ್ ಕೌನ್ಸಿಲ್ ಸಭೆಗೂ ಮುನ್ನ ಪಕ್ಷದ ನಾಯಕರಾದ ಪಳನಿಸ್ವಾಮಿ (Palaniswami) ಮತ್ತು ಪನ್ನೀರಸೆಲ್ವಂ (O Panneerselvam) ಬೆಂಬಲಿಗರು ಪ್ರಧಾನ ಕಚೇರಿಯ ಮುಂದೆ ಸಾಕ್ಷಾತ್ ರೌದ್ರಾವತಾರ ತಾಳಿದ್ದಾರೆ.
ಇಂದು ಎಐಎಡಿಎಂಕೆ (AIADMK) ಪಕ್ಷದ ಮಹತ್ವದ ಜನರಲ್ ಕೌನ್ಸಿಲ್ ಸಭೆ ನಡೆಯುತ್ತಿದೆ. ಇದಕ್ಕೂ ಮುನ್ನ ಮದ್ರಾಸ್ ಹೈಕೋರ್ಟ್ ಈ ಸಭೆಗೆ ಸಮ್ಮತಿ ಸೂಚಿಸಿತ್ತು. ಈ ಮೂಲಕ ಪಕ್ಷದ ಇನ್ನೊಂದು ಬಣ ಪನ್ನೀರಸೆಲ್ವಂಗೆ (O Panneerselvam) ಭಾರಿ ಹಿನ್ನಡೆಯಾಗಿದೆ. ಇದರಿಂದ ಆಕ್ರೋಶಗೊಂಡ ಪನ್ನೀರಸೆಲ್ವಂ (O Panneerselvam) ಬೆಂಬಲಿಗರು ಪಳನಿಸ್ವಾಮಿ (Palaniswami) ಕಾರ್ಯಕರ್ತರ ಜೊತೆ ಸಂಘರ್ಷಕ್ಕಿಳಿದಿದ್ದಾರೆ.
ಪೋಸ್ಟರ್, ಬ್ಯಾನರ್ ಸುಟ್ಟು ಆಕ್ರೋಶ

ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಆಯ್ಕೆ, ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ಪ್ರಸ್ತಾಪಿಸುವ ಸಭೆ ನಡೆಯುತ್ತಿದೆ. ಇದಕ್ಕೂ ಮುನ್ನ ಚೆನ್ನೈನ ಎಐಎಡಿಎಂಕೆ ಕೇಂದ್ರ ಕಚೇರಿಯ ಹೊರಗೆ ಇಬ್ಬರು ನಾಯಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆಯಿತು. ಒಂದೇ ಪಕ್ಷದ ನಾಯಕರಿಬ್ಬರ ಬೆಂಬಲಿಗರು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
ಎರಡು ಗುಂಪುಗಳ ಮಧ್ಯೆ ಗಲಾಟೆ
ಇನ್ನೂ, ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಪ್ರಬಲ ಬಣಕ್ಕೆ ಎಐಎಡಿಎಂಕೆ ಪಕ್ಷದ ನಾಯಕತ್ವದ ಸಿಕ್ಕಿರುವುದೇ ಈ ಸಂಘರ್ಷಕ್ಕೆ ಕಾರಣವಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪನ್ನೀರಸೆಲ್ವಂ ಬಣ, ಎಐಎಡಿಎಂಕೆ ಕಚೇರಿ ಹೊರಗೆ ಸಂಘರ್ಷಕ್ಕಿಳಿದಿದೆ. ಇಬ್ಬರು ನಾಯಕರ ಬೆಂಬಲಿಗರು ಮತ್ತು ಎಐಎಡಿಎಂಕೆ ಧ್ವಜಗಳನ್ನ ಹೊತ್ತ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಉದ್ರಿಕ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಕೆಲವರು ರಸ್ತೆಬದಿ ನಿಲ್ಲಿಸಿದ ವಾಹನಗಳನ್ನ ಜಖಂಗೊಳಿಸಿದ್ದಾರೆ.