ಬ್ರಿಟನ್ ವಿತ್ತ ಸಚಿವ ಸ್ಥಾನಕ್ಕೆ ರಿಷಿ ಗುಡ್ ಬೈ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (British PM Boris Johnson) ವಿರುದ್ಧ ಬಂಡೆದ್ದಿರುವ ಇನ್ಫಿ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಾಕ್ (Rishi Sunak), ವಿತ್ತ ಸಚಿವ ಸ್ಥಾನಕ್ಕೆ ರಾಜೀನಾಮೆ (Resign) ನೀಡಿದ್ದಾರೆ. ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸಾಜಿದ್ (Sajid Javid) ಕೂಡ ಪದವಿ ತ್ಯಜಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ರಿಷಿ ಸುನಾಕ್, ಸಂಪುಟದಲ್ಲಿ ಕೆಲಸ ಮಾಡಿದ ಕೊನೆಯ ಕೆಲಸ ಇದೇ ಎಂದು ಭಾವಿಸಿದ್ದೇನೆ. ನನ್ನ ಈ ನಡೆ ಮುಂದಿನ ಹೋರಾಟಕ್ಕೆ ಹಾದಿ ಮಾಡಿಕೊಡುತ್ತದೆ ಎಂದು ನಂಬಿದ್ದೇನೆ. ಹಾಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ರಿಷಿ ಸುನಾಕ್ (Rishi Sunak) ಹೇಳಿದ್ದಾರೆ.
ಚೀನಾದಲ್ಲಿ ರಿಯಲ್ ಎಸ್ಟೇಟ್ ಬಿಕ್ಕಟ್ಟು

ಚೀನಾದಲ್ಲಿ ರಿಯಲ್ ಎಸ್ಟೇಟ್ (China Real Estate)ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೋಟ್ಯಂತರ ಸಂಖ್ಯೆಯಲ್ಲಿ ಮನೆಗಳು ಖಾಲಿ ಬಿದ್ದಿವೆ. ಹೀಗಾಗಿ, ರಿಯಲ್ ಎಸ್ಟೇಟ್ ಕಂಪನಿಗಳು ರೈತರಿಂದ ಕೃಷಿ ಉತ್ಪನ್ನಗಳಾದ ಕಲ್ಲಂಗಡಿ, ಪೀಚ್, ಬೆಳ್ಳುಳ್ಳಿ ಹಾಗೂ ಗೋಧಿಯನ್ನು ಹಣದ ಬದಲಾಗಿ ಸ್ವೀಕರಿಸಿ ಮನೆ, ನಿವೇಶನಗಳನ್ನು ಮಾರಾಟ ಮಾಡುತ್ತಿವೆ. 5 ಸಾವಿರ ಕೆ.ಜಿ ಕಲ್ಲಂಗಡಿಗೆ 1 ಲಕ್ಷ ಯುವಾನ್ ಲೆಕ್ಕ ಹಾಕಲಾಗುತ್ತಿದೆ. ಈ ಅವಕಾಶವನ್ನು ಖರೀದಿದಾರರು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ 6 ಜಿಲ್ಲೆಗಳಲ್ಲಿ ರಜೆ ಘೋಷಣೆ

ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಿನ್ನೆ ಭಾರೀ ಮಳೆ ಸುರಿದಿದ್ದು, 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡದ ಸಾರಡ್ಕ ಎಂಬಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದಿದ್ದು, ಓಡಾಟ ನಿಷೇಧಿಸಲಾಗಿದೆ. ಇನ್ನು ಮಡಿಕೇರಿ-ಭಾಗಮಂಡಲ, ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದಲ್ಲದೆ ಮಂಗಳೂರಿನ ಉಳ್ಳಾಲದ ಕಡಲ ತೀರದ ಮನೆಗಳು ಅಪಾಯದಲ್ಲಿವೆ.
ಜುಲೈ 10ಕ್ಕೆ ದ್ರೌಪದಿ ಮುರ್ಮು

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಬ್ರೌಪದಿ ಮುರ್ಮು ಜುಲೈ 10 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಪಾಂಡಿಚೇರಿಯ ಉಸ್ತುವಾರಿ ನಿರ್ಮಲ್‌ಕುಮಾರ್ ಸುರಾಣ ತಿಳಿಸಿದ್ದಾರೆ. ದ್ರೌಪದಿ ಮುರ್ಮು ಅವರಿಗೆ ಈಗಾಗಲೇ ಬಹುಮತ ಇದ್ದು, ರಾಷ್ಟ್ರಪತಿ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಅವರು, 2015ರಲ್ಲಿ ಜಾರ್ಖಂಡ್ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದಾರೆ.
ಭಗವದ್ಗೀತೆ – ಗುರೂಜಿ ಕೊಲೆ ಸಂಚು..?

ಚಂದ್ರಶೇಖರ ಗುರೂಜಿಯ ಕೊಲೆಯ ಸಂಚು ಐದು ದಿನಗಳ ಹಿಂದೆಯೇ ನಡೆದಿತ್ತಾ? ಎಂಬ ಅನುಮಾನವೊಂದು ಇದೀಗ ಉಂಟಾಗಿದೆ. ಆರೋಪಿ ಮಹಾಂತೇಶ ಶಿರೂರ್ ತನ್ನ ಫೇಸ್ ಬುಕ್ ಪ್ರೊಫೈಲ್‌ನಲ್ಲಿ ಭಗವದ್ಗೀತೆಯ ಸಾಲಿನ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾನೆ. ಧರ್ಮವನ್ನು ಉಳಿಸಲು ಬೇಗ ಅವತರಿಸು ಎಂದು ದೇವರನ್ನು ಕೇಳಿಕೊಂಡಿದ್ದಾನೆ. ಈ ಮೂಲಕ ಐದು ದಿನಗಳ ಹಿಂದೆಯೇ ಅಂದರೆ ಜೂನ್ 30ರಂದು ಆತ ಗುರೂಜಿ ಕೊಲೆಗೆ ಸಂಚು ರೂಪಿಸಿದ್ದನಾ? ಎಂಬ ಅನುಮಾನ ಉಂಟಾಗಿದೆ.
ಕಾಳಿ ಮಾಂಸ ತಿನ್ನುವ ದೇವತೆ..!

ವಿವಿಧ ಧರ್ಮಗಳ ದೇವರನ್ನು ಅವಹೇಳನಗೊಳಿಸಿದ ವಿವಾದಗಳು ಭುಗಿಲೆದ್ದಿರುವ ಸಂದರ್ಭದಲ್ಲೇ ಕೋಲ್ಕತ್ತಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನನ್ನ ಪ್ರಕಾರ ಕಾಳಿ ಮಾಂಸ ಸೇವಿಸುವ ಹಾಗೂ ಮದ್ಯ ಸ್ವೀಕರಿಸುವ ದೇವತೆ ಎಂದು ಹೇಳಿದ್ದಾರೆ. ನಿಮ್ಮ ದೇವತೆಯನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ. ಸಿಕ್ಕಿಂನಲ್ಲಿ ದೇವತೆಗೆ ವಿಸ್ಕಿ ಅರ್ಪಿಸಲಾಗುತ್ತದೆ. ಆದರೆ, ಬೇರೆಡೆ ಇದು ದೇವನಿಂದನೆ, ಅಪಚಾರ ಎನಿಸುತ್ತದೆ ಎಂದು ಮೊಯಿತ್ರಾ ವಾದಿಸಿದ್ದಾರೆ.
ಸಿದ್ದರಾಮೋತ್ಸವಕ್ಕೆ ರಾಹುಲ್ ಚಾಲನೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಉದ್ಘಾಟಿಸಲಿದ್ದಾರೆ ಎಂದು ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಕೈ ಹಿರಿಯ ನಾಯಕರಾದ ರಂದೀಪ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್ ಸೇರಿ ಸಾಕಷ್ಟು ಮಂದಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಲಾಲು ಆರೋಗ್ಯದ ಬಗ್ಗೆ ಪಡೆದ ಮೋದಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಹಾರದ ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಚಾರಿಸಿದ್ದಾರೆ. ಮೂಲಗಳ ಪ್ರಕಾರ, ಪ್ರಧಾನಮಂತ್ರಿಗಳು ಲಾಲು ಅವರ ಪುತ್ರ ತೇಜಸ್ವಿ ಯಾದವ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ, ಮಾಹಿತಿ ಪಡೆದು, ಆದಷ್ಟೂ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಮೆಟ್ಟಿಲುಗಳ ಮೈಮೇಲಿನಿಂದ ಜಾರಿ ಬಿದ್ದಿದ್ದ ಕಾರಣ ಲಾಲು ಅವರ ಭುಜಕ್ಕೆ ಪೆಟ್ಟು ಬಿದ್ದಿತ್ತು.