ಪ್ರಧಾನಿಗೆ ನರೇಗಾ ಮಹತ್ವದ ಅರಿವಿಲ್ಲ

ಕೋವಿಡ್ (Covid-19) ಸಂದರ್ಭದಲ್ಲಿ ದೇಶದ ಲಕ್ಷಾಂತರ ಜನರ ಜೀವನವನ್ನು ನರೇಗಾ ಯೋಜನೆ (Mahatma Gandhi NREGA) ಕಾಪಾಡಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಅದನ್ನು ಒಪ್ಪುವ ಔದಾರ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕಿಡಿಕಾರಿದ್ದಾರೆ. ಕೇರಳದಲ್ಲಿ (Kerala) ನರೇಗಾ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ (Rahul Gandhi), ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ (NREGA) ದಿನಗಳನ್ನು 200ಕ್ಕೆ ಏರಿಸಬೇಕು. ಕಾರ್ಮಿಕರ ಕೂಲಿಯನ್ನು ದಿನಕ್ಕೆ 400 ರೂ.ಗೆ ಏರಿಸಬೇಕು. ಅಲ್ಲದೆ ಈ ಯೋಜನೆಯನ್ನು ಭತ್ತ ಕೃಷಿ (Agriculture) ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಎಐಡಿಎಂಕೆ ಬೆಂಬಲ ಕೋರಿಲ್ಲ

ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ (Yashwant Sinha) ಅವರಿಗೆ ಬೆಂಬಲ ಕೋರಿ ಎಐಎಡಿಎಂಕೆ (AIADMK) ನಾಯಕ ಇ ಪಳನಿಸ್ವಾಮಿ ಅವರಿಗೆ ರಾಹುಲ್ ಗಾಂಧಿ (Rahul Gandhi) ಕರೆ ಮಾಡಿದ್ದಾರೆ ಎಂಬ ವರದಿಗಳನ್ನು ಕಾಂಗ್ರೆಸ್ (Congress), ಬೊಗಳೆ ಎಂದು ತಳ್ಳಿಹಾಕಿದೆ. ಈ ಸಂಬಂಧ ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಜೈರಾಮ್ ರಮೇಶ್ (Jairam Ramesh) ಭಾನುವಾರ ಮಾತನಾಡಿದ್ದು, ಮಾಧ್ಯಮ ವರದಿ ಬೋಗಸ್, ಸುಳ್ಳು ಮತ್ತು ಗೊಂದಲ ಬಿತ್ತುವ ಕಿಡಿಗೇಡಿತನದ ಪ್ರಯತ್ನ ಎಂದು ಹೇಳಿದ್ದಾರೆ. ಇದು ಸಂಪೂರ್ಣ ಸುಳ್ಳು. ಅಂತಹ ಯಾವುದೇ ಫೋನ್ ಕರೆಯನ್ನು ರಾಹುಲ್ (Rahul Gandhi) ಮಾಡಿಲ್ಲ. ಡಿಎಂಕೆ-ಕಾಂಗ್ರೆಸ್ (DMK-Congress) ಮೈತ್ರಿ ಗಟ್ಟಿಯಾಗಿದೆ ಎಂದಿದ್ದಾರೆ.
ಕಣ್ಣೆದುರಲ್ಲೇ ಕಾನೂನು ಉಲ್ಲಂಘನೆ

ನ್ಯಾಯಾಂಗದ ಕೆಲ ಸದಸ್ಯರ ನಡೆಯಿಂದಾಗಿ ನನ್ನ ತಲೆಯನ್ನು ನಾಚಿಕೆಯಿಂದ ತಗ್ಗಿಸುತ್ತೇನೆ. ನ್ಯಾಯಾಂಗ ಕುರುಡಾದರೆ, ಕಣ್ಣೆದುರಲ್ಲೇ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಭಾನುವಾರ ಪ್ರತಿಕ್ರಿಯಿಸಿರುವ ಅವರು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಂಸ್ಥೆಗಳ ಕತ್ತು ಹಿಸುಕಲಾಗುತ್ತಿದೆ. ಬಿಜೆಪಿಯು ಕಾಂಗ್ರೆಸ್ ಮುಕ್ತ ಭಾರತ ಬಯಸುತ್ತಿಲ್ಲ, ಪ್ರತಿಪಕ್ಷಗಳೇ ಇಲ್ಲದ ಭಾರತವನ್ನು ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯಿಂದ ಪ್ರಜಾಪ್ರಭುತ್ವದ ಮಾರಾಟ

ಪ್ರಜಾಪ್ರಭುತ್ವ ಮಾರಾಟಕ್ಕಿದೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಿದೆ. ಯಾರು ಬೇಕಾದರೂ ಬಂದು ಹಣ ತೆಗೆದುಕೊಂಡು ಬಿಜೆಪಿ ಸೇರಬಹುದು ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ರಾಜಕೀಯದ ಬಗ್ಗೆ ಭಾನುವಾರ ಮಾತನಾಡಿದ ಅವರು, ಶಿವಸೇನಾ ಬಂಡಾಯ ಬಣ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ಜುಲೈ 4ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡಲಿದೆ. ಸ್ಪೀಕರ್ ಆಗಿ ಬಿಜೆಪಿಯ ರಾಹುಲ್ ನರ್ವೇಕರ್ ಆಯ್ಕೆಯಾಗಿದ್ದು, ಏಕನಾಥ್ ಶಿಂಧೆ ಮತ್ತು ಬಿಜೆಪಿ ದೋಸ್ತಿಗೆ ಮೊದಲ ಗೆಲುವು ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.
ಯುಪಿಯಲ್ಲಿ ಪಕ್ಷದ ಘಟಕಗಳನ್ನು ವಿಸರ್ಜಿಸಿದ ಅಖಿಲೇಶ್

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದಲ್ಲಿ ಪಕ್ಷದ ಎಲ್ಲ ಘಟಕಗಳನ್ನು ಭಾನುವಾರ ವಿಸರ್ಜಿಸಿದ್ದಾರೆ. ಯುವ, ಮಹಿಳಾ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಘಟಕಗಳನ್ನೂ ವಿಸರ್ಜಿಸಿದ್ದಾರೆ. ಈ ವಿಸರ್ಜನೆಗೆ ಕಾರಣ ತಿಳಿಸಿಲ್ಲ. ಇತ್ತೀಚೆಗೆ ನಡೆದ ರಾಂಪುರ, ಅಜಂಗಢ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಯುಪಿ ಘಟಕದ ಅಧ್ಯಕ್ಷ ನರೇಶ್ ಉತ್ತಮ್ ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಪಕ್ಷ ಹೇಳಿದೆ.
ತೆಲಂಗಾಣದಲ್ಲಿ ಡಬಲ್ ಎಂಜಿನ್ ಸರ್ಕಾರ

ತೆಲಂಗಾಣದಲ್ಲಿಯೂ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್‌ನಲ್ಲಿ ಭಾನುವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಕೆಲವು ರಾಜ್ಯಗಳಲ್ಲಿ ಡಬಲ್ ಎಂಜಿನ್ ಸರ್ಕಾರ ಅಸ್ತಿತ್ವದಲ್ಲಿದ್ದು, ಜನರಿಗೆ ನಮ್ಮ ಆಡಳಿತದಲ್ಲಿ ಪೂರ್ಣ ನಂಬಿಕೆ ಬಂದಿದೆ. ಹೀಗಾಗಿ, ಮುಂದೆ ತೆಲಂಗಾಣ ರಾಜ್ಯದಲ್ಲಿಯೂ ಡಬಲ್ ಎಂಜಿನ್ ಸರ್ಕಾರ ಸ್ಥಾಪನೆಗೆ ಜನರ ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಇಲ್ಲಿಗೆ ಬಂದಿರುವುದಾಗಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಬಿಜೆಪಿ ರಣಕಹಳೆ

ತೆಲಂಗಾಣದಲ್ಲಿ ಬಿಜೆಪಿ ರಣಕಹಳೆ ಮೊಳಗಿಸಿದ್ದು, ಗೃಹ ಸಚಿವ ಅಮಿತ್ ಶಾ ಅವರು ಕೆ.ಸಿ.ಆರ್. ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಹೈದರಾಬಾದ್‌ನಲ್ಲಿ ಭಾನುವಾರ ಸಾರ್ವಜನಿಕ ಸಭೆಯಲ್ಲಿ ಅಮಿಶ್ ಶಾ, ಇಲ್ಲಿ ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗಲಿ, ಮುಂದೆ ನಮ್ಮದೇ ಸರ್ಕಾರ ಎಂದು ಕೆಸಿಆರ್‌ಗೆ ಹೇಳಲು ಬಯಸುವೆ. ನೀವು ಏನೆಲ್ಲ ಅಡೆ-ತಡೆ ಮಾಡಿದರೂ ಅದನ್ನು ಎದುರಿಸಲು ಬಿಜೆಪಿ ಸಿದ್ಧ. ಕೆಸಿಆರ್ ನನ್ನ ಮಾತು ನೆನಪಿಟ್ಟುಕೊಳ್ಳಿ. ಮುಂದಿನ ಬಾರಿ ನಿಮ್ಮದಲ್ಲ, ನಿಮ್ಮ ಮಗನದಲ್ಲ, ಬದಲಿಗೆ ಬಿಜೆಪಿ ಸರ್ಕಾರ ಬರುತ್ತದೆ ಎಂದು ಅಮಿಶ್ ಶಾ ಸವಾಲು ಹಾಕಿದ್ದಾರೆ.
ಮಹಾ ಸಿಎಂ ಶಿಂಧೆಗೆ ಅಗ್ನಿಪರೀಕ್ಷೆ

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಶಿವಸೇನೆಯ ರೆಬೆಲ್ ಶಾಸಕ ಏಕನಾಥ್ ಶಿಂಧೆ ಅವರು ಇಂದು ವಿಶೇಷ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆ. ವಿಧಾನಸಭೆಯ ಸ್ಪೀಕರ್ ಆಗಿ ನಿನ್ನೆ ಬಿಜೆಪಿಯ ರಾಹುಲ್ ನಾರ್ವೇಕರ್ ಆಯ್ಕೆಯಾಗಿದ್ದಾರೆ. ಸಭಾಧ್ಯಕ್ಷರ ಉಪಸ್ಥಿತಿಯಲ್ಲಿ ವಿಶ್ವಾಸಮತಯಾಚನಾ ಪ್ರಕ್ರಿಯೆ ನಡೆಯಲಿದೆ. ಮುಖ್ಯಮಂತ್ರಿಗಳಿಗೆ ಬಿಜೆಪಿ ಶಾಸಕರು, ಬಂಡಾಯ ಬಣದಲ್ಲಿರುವ ಶಿವಸೈನಿಕರು ಮತ್ತು ಕೆಲ ಪಕ್ಷೇತರರು ಬೆಂಬಲ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಬಂಡಾಯ ಶಾಸಕರು ಶಿಂಧೆ ವಿರುದ್ಧ ತಿರುಗಿಬಿದ್ದರೆ ಶಿಂಧೆ ಸರ್ಕಾರ ಪತನವಾಗಲಿದೆ.
ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆ

ಇಂದು ಹಿಂದೂ ಸಂತ ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆ. ವಿವೇಕಾನಂದರು 1863ರ ಜನವರಿ 12ರಂದು ಕಲ್ಕತ್ತಾದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಇವರ ಮೂಲ ಹೆಸರು ನರೇಂದ್ರನಾಥ ದತ್ತ. ಇವರು ಯುವ ಸನ್ಯಾಸಿಯಾಗಿ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಹರಡಿದರು. ಇವರ ಜನ್ಮದಿನವನ್ನು ದೇಶದಲ್ಲಿ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಇವರು 1902ರ ಜುಲೈ 4ರಂದು ಬ್ರಿಟಿಷ್ ಇಂಡಿಯಾದ ಬೆಂಗಾಲ್ ಪ್ರೆಸಿಡೆನ್ಸಿಯ ಬೇಲೂರು ಮಠದಲ್ಲಿ ನಿಧನರಾದರು. ಇದು ಇಂದು ಪಶ್ಚಿಮ ಬಂಗಾಳ ರಾಜ್ಯದಲ್ಲಿದೆ.
ಕನ್ನಡತಿ ಸಿನಿ ಶೆಟ್ಟಿ 2022ರ ಮಿಸ್ ಇಂಡಿಯಾ

ಕರ್ನಾಟಕ ಮೂಲದ ಮುಂಬೈನಲ್ಲಿ ನೆಲೆಸಿರುವ 21 ವರ್ಷದ ಸಿನಿ ಶೆಟ್ಟಿ ಅವರು 2022ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕಿರೀಟ ತೊಟ್ಟಿದ್ದಾರೆ. ಅಕೌಂಟಿಂಗ್ ಮತ್ತು ಫೈನಾನ್ಸ್ ನಲ್ಲಿ ಪದವಿ ಪಡೆದಿರುವ ಇವರು, ಪ್ರಸ್ತುತ ವೃತ್ತಿಪರ ಕೋರ್ಸ್ ಸಿಎಫ್‌ಎ (CFA) ಮಾಡುತ್ತಿದ್ದಾರೆ. ಸಿನಿ ಶೆಟ್ಟಿ ಭರತನಾಟ್ಯಂ ನೃತ್ಯಗಾರ್ತಿ ಕೂಡ ಆಗಿದ್ದಾರೆ. ಇನ್ನು ರಾಜಸ್ಥಾನದ ರೂಬಲ್ ಶೇಖಾವತ್ ಮೊದಲ ರನ್ನರ್ ಅಪ್ ಆಗಿದ್ದರೆ, ಉತ್ತರ ಪ್ರದೇಶದ ಶಿನತಾ ಚೌಹಾಣ್ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.