ಬೆಂಗಳೂರು:(ಜು.3): President Election: ಜುಲೈನಲ್ಲಿ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರದ ಅವಧಿ ಮುಗಿಯಲಿದ್ದು, ಸದ್ಯ ಹೀಗಾಗಿ ತೆರವಾಗಲಿರುವ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ರಾಷ್ಟ್ರಪತಿ ಚುನಾವಣೆಗೆ ಈಗಲೇ ದಿನಾಂಕ ಫಿಕ್ಸ್ ಆಗಿದ್ದು, ಇನ್ನೂ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ.ಅಭ್ಯರ್ಥಿಗಳು ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಚುನಾವಣೆಯ ಮತ ಲೆಕ್ಕಾಚಾರ ಹೇಗಿದೆ? ಮಾಹಿತಿ ಇಲ್ಲಿದೆ.
ರಾಷ್ಟ್ರಪತಿ ಚುನಾವಣೆಯ ಕಣದಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಇವರ ಪೈಪೋಟಿಯ
ಮತಗಳ ಬಲಾಬಲ ನೋಡಿದರೆ ಎನ್‌ಡಿಎ ಅಭ್ಯರ್ಥಿ ಗೆಲುವು ಬಹುತೇಕ ಖಚಿತದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಯನ್ನು ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಸದಸ್ಯರು ಮತದಾನ ಮಾಡಿ ಆಯ್ಕೆ ಮಾಡುವರು.
ವಿಧಾನಪರಿಷತ್ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ. ರಹಸ್ಯ ಮತದಾನ ನಡೆಯುತ್ತದೆ. ಈ ಚುನಾವಣೆಯಲ್ಲಿ ಮತ ಚಲಾಯಿಸುವ ಶಾಸಕರ ಮತಗಳ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನ. ಆದರೆ ಸಂಸದರ ಮತಗಳು ಮೌಲ್ಯ ಸಮಾನವಾಗಿರುತ್ತದೆ. ಆಯಾ ರಾಜ್ಯದ ಜನಸಂಖ್ಯೆಯ ಆಧಾರದಲ್ಲಿ ಆಯಾ ರಾಜ್ಯಗಳ ಶಾಸಕರ ಮತ ಮೌಲ್ಯ ನಿಗದಿಯಾಗುತ್ತದೆ.
ಕರ್ನಾಟಕದ ಶಾಸಕನ ಮತಮೌಲ್ಯ 131:
ರಾಜ್ಯದಲ್ಲಿ 224 ಶಾಸಕರಿದ್ದಾರೆ. ಒಟ್ಟು ಮತಮೌಲ್ಯ 29,344. 1971ರ ಜನಗಣತಿಯ ಆಧಾರದಂತೆ ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಮತಮೌಲ್ಯ ಸಿಗುತ್ತದೆ. ಅದರಂತೆ, ರಾಜ್ಯ ಶಾಸಕರ ಮತಮೌಲ್ಯ 131 ಎಂದು ಕರ್ನಾಟಕ ರಾಜ್ಯದ ಚುನಾವಣಾಧಿಕಾರಿ ವಿಶಾಲಾಕ್ಷಿ ತಿಳಿಸಿದರು.
ಸಂಸದರ ಮತಮೌಲ್ಯ 700:
ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಪ್ರಸ್ತುತ 776 ಸಂಸದರಿದ್ದಾರೆ. ಪ್ರತಿ ಸಂಸದರ ಮತಮೌಲ್ಯ 700. ಈ ಮತಮೌಲ್ಯ ರಾಜ್ಯದ ಎಲ್ಲಾ ಸಂಸದರಿಗೆ ಸಮಾನ. ಕಳೆದ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರ ಮತ ಮೌಲ್ಯ 708 ಆಗಿತ್ತು. ಈ ಬಾರಿ ಅದು 700ಕ್ಕೆ ಇಳಿಕೆಯಾಗಿದೆ. ಸಂಸದರ ಮತಮೌಲ್ಯವನ್ನೂ ಜನಸಂಖ್ಯೆಯ ಆಧಾರದಲ್ಲಿಯೇ ಲೆಕ್ಕ ಹಾಕಲಾಗುತ್ತದೆ.
ರಾಷ್ಟ್ರಪತಿ ಚುನಾವಣೆಯ ಒಟ್ಟು ಮತಮೌಲ್ಯ:
ಒಟ್ಟು ಸಂಸದರ ಸಂಖ್ಯೆ 776 (ಲೋಕಸಭೆ ಸಂಸದರು 543+ರಾಜ್ಯಸಭೆ ಸಂಸದರು 233). ಅದರಂತೆ ಒಟ್ಟು ಸಂಸದರ ಮತಮೌಲ್ಯ 700X776= 5,43,200. ಒಟ್ಟು ಮತದಾರರ ಸಂಖ್ಯೆ ಶಾಸಕರು 4033 + ಸಂಸದರು 776 = 4809 ಆಗಿದೆ. ಈ ಬಾರಿ ರಾಷ್ಟ್ರಪತಿ ಚುನಾವಣೆಯಲ್ಲಿನ ಒಟ್ಟು ಮತದಾರರ ಮತಮೌಲ್ಯ 10,86,431 ಆಗಿದೆ.