Breaking News : (ಜು.2):ಮಾಜಿ ಸಚಿವೆ ಹಾಗೂ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಅವರ ನಿವಾಸಕ್ಕೆ ಅನಾಮಧೇಯ ವ್ಯಕ್ತಿಯಿಂದ ಕೊಲೆ ಬೆದರಿಕೆ ಪತ್ರ ಬಂದಿದೆ.
ಹೌದು, ಬೆಂಗಳೂರಿನ ಸಂಜಯ ನಗರದಲ್ಲಿರುವ ಅವರ ನಿವಾಸಕ್ಕೆ ಪತ್ರ ಬಂದಿದ್ದು, ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಲವು ಸಾಹಿತಿಗಳ ಹೆಸರುಗಳನ್ನು ಉಲ್ಲೇಖಿಸಿ, ಬೆದರಿಕೆಯೊಡ್ಡಲಾಗಿದೆ.
ಈ ಸಂಬಂಧ ಸಂಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಲಲಿತಾ ನಾಯಕ್ ಅವರಿಂದ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಹಿಂದೆಯೂ ಸಿದ್ದು-ಎಚ್ ಡಿಕೆಗೆ ಬಂದಿತ್ತು ಬೆದರಿಕೆ
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಾಹಿತಿ ಕುಂ. ವೀರಭದ್ರಪ್ಪ ಸೇರಿದಂತೆ ಒಟ್ಟು 61 ಜನ ಸಾಹಿತಿಗಳಿಗೆ ಈ ಹಿಂದೆ ಕೊಲೆ ಬೆದರಿಕೆಯೊಡ್ಡಲಾಗಿತ್ತು.
ಸಹಿಷ್ಣು ಹಿಂದೂ ಎಂಬ ಹೆಸರಿನಲ್ಲಿ ಕೊಲೆ ಬೆದರಿಕೆ ಪತ್ರ ಬಂದಿತ್ತು. ‘ನೀವು ಸರ್ವನಾಶದ ಹಾದಿಯಲ್ಲಿದ್ದೀರಿ, ಸಾವು ಹತ್ತಿರವಿದೆ, ನೀವು ಸಿದ್ಧವಾಗಿರಿ. ನಿಮಗೆ ಸಾವು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ನಿಮ್ಮ ಮನೆಯವರಿಗೆ ಹೇಳಿ, ನಿಮ್ಮ ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಿ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.