Mekedatu Padayathre 2.0: ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷವಾಕ್ಯದೊಂದಿಗೆ ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆ ಕೆಂಗೇರಿ ಪ್ರವೇಶಿಸುವ ಮೂಲಕ ಸೋಮವಾರ ರಾಜ್ಯ ರಾಜಧಾನಿ ಬೆಂಗಳೂರು ತಲುಪಿದೆ. ಮೂರನೆ ದಿನವಾದ ಇಂದು ಇಂದು ಕೆಂಗೇರಿಯಿಂದ ಬಿಟಿಎಂ ಲೇಔಟ್‌ವರೆಗೆ ಪಾದಯಾತ್ರೆ ನಡೆಯುತ್ತದೆ.
ಎರಡನೇ ಹಂತದ ಪಾದಯಾತ್ರೆಯ ಎರಡನೇ ದಿನ ಬಿಡದಿಯಿಂದ ಆರಂಭವಾಯಿತು. ಮೊದಲ ದಿನ ಪಾದಯಾತ್ರೆ ಮುಗಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರು ಬಾನಂದೂರಿನ ಆದಿಚುಂಚನಗಿರಿ ಮಠದಲ್ಲಿ ವಾಸ್ತವ್ಯ ಹೂಡಿದ್ದರು.
ಸೋಮವಾರ ಬೆಳಗ್ಗೆ ಆಂಜನೇಯ ಸ್ವಾಮಿ ಹಾಗೂ ಬಸವ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಶಿವಕುಮಾರ್ ಅವರು ಆದಿಚುಂಚನಗಿರಿ ರಾಮನಗರ ಶಾಖಾಮಠದ ಅನ್ನದಾನಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅಲ್ಲಿಂದ ನೇರವಾಗಿ ಬಿಡದಿಗೆ ಆಗಮಿಸಿದ ಶಿವಕುಮಾರ್ ಅವರು ಪಾದಯಾತ್ರೆ ಆರಂಭಿಸಿದರು.
ಈ ಮಧ್ಯೆ ಬಿಡದಿ ಮಾಜಿ ಶಾಸಕ ಬಾಲಕೃಷ್ಣ ಅವರ ಜನ್ಮದಿನ ನಿಮಿತ್ತ ಬಾನಂದೂರಿನಲ್ಲಿ ಕೇಕ್ ಕತ್ತರಿಸಿ, ನಂತರ ಬಿಡದಿಯಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನ ಬೃಹತ್ ಪುಷ್ಪಮಾಲೆ ಹಾಕಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮತ್ತಿತರ ನಾಯಕರು ಹಾಜರಿದ್ದರು.
ಎರಡನೇ ದಿನದ ಪಾದಯಾತ್ರೆಗೆ ತುಮಕೂರು, ರಾಮನಗರ, ಕನಕಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಹೆಜ್ಜೆ ಹಾಕಿದರು. ಪಾದಯಾತ್ರೆಗೆ ಸಾಂಸ್ಕೃತಿಕ, ಜಾನಪದ ಕಲಾ ತಂಡಗಳು ಕಳೆಕಟ್ಟಿದವು.
ಪಾದಯಾತ್ರೆಯಲ್ಲಿ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು ಹಾಗೂ ಇತರ ಪೀಠಗಳ ಶ್ರೀಗಳು ಭಾಗವಹಿಸಿದರು. ಈ ಹೋರಾಟ ಯಶಸ್ವಿಯಾಗಲಿ ಎಂದು ಹರಸಿದರು.
ಪಾದಯಾತ್ರೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಧ್ರುವನಾರಾಯಣ್, ಮುಖಂಡರಾದ ಬಾಲಕೃಷ್ಣ, ಮಧು ಬಂಗಾರಪ್ಪ, ರಂಗನಾಥ್ , ವೆಂಕಟರಮಣಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ದಾರಿಯುದ್ದಕ್ಕೂ ಪಾದಯಾತ್ರಿಗಳಿಗೆ ಎಳನೀರು, ಕಬ್ಬಿನ ಹಾಲು, ನೀರು, ಪಾನಕ ಪೂರೈಸಲಾಯಿತು.ಸೋಮವಾರ ರಾತ್ರಿ ಕೆಂಗೇರಿ ಪ್ರವೇಶಿಸಿದ ಪಾದಯಾತ್ರೆ ಮಂಗಳವಾರದಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದ್ದು, ಮಾರ್ಚ್ 3 ರಂದು ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾವೇಶದೊಂದಿಗೆ ಸಮಾಪ್ತಿಯಾಗಲಿದೆ.
ಇಂದು ಎಲ್ಲೆಲ್ಲಿ ಸಾಗಲಿದೆ
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಇಂದು ಬೆಂಗಳೂರಿನಿಂದ ಪಾದಯಾತ್ರೆ ಆರಂಭವಾಗಿ ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್, ಪೂರ್ಣಿಮ ಕನ್ವೆಂಷನ್ ಹಾಲ್, ಜ್ಞಾನಭಾರತಿ ಮೆಟ್ರೋ ಸ್ಟೇಷನ್, ನಾಯಂಡನಹಳ್ಳಿ, ನಾಯಂಡನಹಳ್ಳಿ ಜಂಕ್ಷನ್, ಪೆಸೆಟ್ ಕಾಲೇಜ್ ಜಂಕ್ಷನ್, ಕತ್ರಿಗುಪ್ಪೆ ಮುಖ್ಯರಸ್ತೆ ಜಂಕ್ಷನ್ ತಲುಪುತ್ತದೆ. ನಂತರ ವೆಂಕಟಾದ್ರಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನದ ಊಟಕ್ಕೆ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಮತ್ತೆ ಪಾದಯಾತ್ರೆ ಆರಂಭವಾಗುತ್ತದೆ. ಕದಿರೇನಹಳ್ಳಿ ಜಂಕ್ಷನ್, ಬನಶಂಕರಿ ದೇವಾಲಯ, ಜಯದೇವ ಆಸ್ಪತ್ರೆ, ಅದೈತ್ ಪೆಟ್ರೋಲ್ ಬಂಕ್ ಮೂಲಕ ಬಿಟಿಎಂ ಲೇಔಟ್ನಲ್ಲಿ ಮೂರನೇ ದಿನದ ಪಾದಯಾತ್ರೆ ಅಂತ್ಯವಾಗುತ್ತದೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ವಿವಿ ಗೇಟ್, ಆರ್.ಆರ್.ನಗರ ಗೇಟ್, ನಾಯಂಡಹಳ್ಳಿ ಬಳಿ ರಿಂಗ್ ರೋಡ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.ನೀರಿಗಾಗಿ ಹೋರಾಟ ಮಾಡ್ತಿರೋದು. ಯಾರ ಹೆದರಿಕೆಗೋ ಜಗ್ಗಲ್ಲ. ಹೋರಾಟ ಮಾಡೋದಕ್ಕೆ ಪರ್ಮಿಷನ್ ಯಾಕೆ ಬೇಕು. ಇವರದ್ದು ಯೋಜನೆ ಜಾರಿ ಮಾಡಲು ವಿಳಂಬನೆ ದೋರಣೆ ಮಾಡುತ್ತಿದೆ. ಟ್ರಾಫಿಕ್ ಜಾಮ್ ಸ್ವಲ್ಪ ಅನುಸರಿಸಕೊಳ್ಳಬೇಕು. ನೀರಿನ ಪರಿಹಾರ ಮುಖ್ಯ ಅಂತ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿಗೆ ನೀರು ಬೇಕು, ನೀರಿಗಾಗಿ ಹೆಜ್ಜೆ ಹಾಕುತ್ತಿದ್ದೀರ ಅಂತ ನಾಯಂಡಹಳ್ಳಿ ಜಂಕ್ಷನ್ ಬಳಿ ಡಿಕೆ ಶಿವಕುಮಾರ್ ಭಾಷಣ ಮಾಡಿದರು. ಬಿಬಿಎಂಪಿ ನಮ್ಮ ಫ್ಲೆಕ್ಸ್ ತೆಗೆದು ಬಿಜೆಪಿ ಅಂತ ಹಾಕಿಕೊಳ್ಳಲಿ. ಅವರು ಏನೇ ಮಾಡಲಿ ನಮ್ಮ ಹೋರಾಟ ನಿಲ್ಲಲ್ಲ ಎಂದು ಹೇಳಿದರು.