Russia Ukraine Crisis: (ಫೆ.27): ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳ ಕರೆತರುವ ಬಗ್ಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಈ ಕುರಿತು ನೋಡಲ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಉಕ್ರೇನ್ ನಲ್ಲಿ ಸಿಲುಕಿರುವ ಜಿಲ್ಲೆಯ ವಿದ್ಯಾರ್ಥಿಗಳ ಕುರಿತು ಮಾಹಿತಿ ಪಡೆದುಕೊಂಡರು. ಸರ್ಕಾರ ಎಲ್ಲಾ ರೀತಿಯ ಕ್ರಮಗೈಗೊಳ್ಳುತ್ತಿದ್ದು ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಿದರು.
ಇದೇ ವೇಳೆ ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಸಚಿವರು ಕೇಳಿದ ಮಾಹಿತಿಗೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಇಂದು 18 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು 30 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ 101%ನಷ್ಟು ಮೊದಲ ಡೋಸ್ ಲಸಿಕೆ ಹಾಕಲಾಗಿದ್ದರೆ 96%ನಷ್ಟು ಎರಡನೇ ಡೋಸ್ ಲಸಿಕೆ ಹಾಕಲಾಗಿದೆ. ಸಾಕಷ್ಟು ಲಸಿಕೆ ದಾಸ್ತಾನಿದ್ದು ಕೊರೋನಾ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ನಡಿಗೆ ಹಳ್ಳಿ ಕಡೆಗೆ ಜನಸ್ಪಂದನ ಕಾರ್ಯಕ್ರಮ:
ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾತನಾಡಿ, ಕೋವಿಡ್ ನಿಯಂತ್ರಣದಲ್ಲಿದೆ ಆದರೂ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು ಕೋವಿಡ್ ನಿಯಮ ಪಾಲನೆ ಮಾಡಲಾಗುತ್ತಿದೆ. ಶಿವರಾತ್ರಿ ಹಬ್ಬದ ಅಂಗವಾಗಿ ನಿಯಮಾನುಸಾರ ಕೆಲವೊಂದು ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ನಡಿಗೆ ಹಳ್ಳಿ ಕಡೆಗೆ ಎಂಬ ಜನಸ್ಪಂದನ ಕಾರ್ಯಕ್ರಮದ ಕುರಿತು ಸಚಿವರು ಚರ್ಚೆ ನಡೆಸಿದರು. ಇದೇ ವೇಳೆ ಏರ್ ಪೋರ್ಟ್ ರನ್ ವೇ ವಿಸ್ತರಣೆ ಕುರಿತಂತೆ ಚರ್ಚೆ ಮಾಡಲಾಯಿತು.
ಮೈಸೂರು ಮೇಯರ್ ಸುನಂದಾ ಪಾಲನೇತ್ರಾ, ಮೂಡಾ ಅಧ್ಯಕ್ಷ ಎಚ್.ವಿ. ರಾಜೀವ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಅಪ್ಪಣ್ಣ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಪಂ ಸಿಇಒ ಡಾ. ಬಿ.ಆರ್. ಪೂರ್ಣಿಮಾ, ಎಎಸ್ ಪಿ ಆರ್.ಶಿವಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಚ್.ಪ್ರಸಾದ್, ಡಿಡಿಪಿಯು ಶ್ರೀನಿವಾಸ್ ಮೂರ್ತಿ, ಡಿಡಿಪಿಐ ರಾಮಚಂದ್ರ ರಾಜೇ ಅರಸ್, ಮೂಡಾ ಅಧೀಕ್ಷಕ ಇಂಜಿನಿಯರ್ ಶಂಕರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Operation Ganga: 4ನೇ ದಿನಕ್ಕೆ ಕಾಲಿಟ್ಟ ರಷ್ಯಾ ಉಕ್ರೇನ್ ಕದನ: ತವರಿಗೆ ಮರಳಿದ 250 ಭಾರತೀಯರು