ಮಂಗಳೂರು: (ಫೆ.25): Hijab Row: ಹಿಜಾಬ್ ಧರಿಸಬೇಡಿ ಎಂದ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಿರುವುದಕ್ಕೆ ವಿದ್ಯಾರ್ಥಿಗಳು ಪ್ರತಿಭಟಿಸಿದರು. ಖಾಸಗಿ ಕಾಲೇಜಿನಲ್ಲಿ ಶಿಕ್ಷಣ ಇಲಾಖೆಯ ಆದೇಶದಂತೆ ಹಿಜಾಬ್ ಧರಿಸಬೇಡಿ ಎಂದು ಹೇಳಾಲಾಗಿತ್ತು. ಆದರೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದು,ಪ್ರವೇಶ ನಿರಾಕರಿಸಿದ್ದಾರೆ ಹಾಗೂ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆಯ ಆದೇಶದಂತೆ ಕಾಲೇಜು ಆಡಳಿತ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಹಿಜಾಬ್ ತೆಗೆದು ಬರುವಂತೆ ಸೂಚನೆ ನೀಡಿದೆ. ಈ ವೇಳೆ ವಿದ್ಯಾರ್ಥಿಗಳು ಕೋರ್ಟ್ ಆದೇಶ ಬರಲಿ ಮತ್ತೆ ನೋಡೋಣ. ಅಲ್ಲಿಯವರೆಗೆ ಹಿಜಾಬ್ ಧರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.ನಮಗೆ ಟಿ.ಸಿ ಕೊಡಿ. ಇಲ್ಲವೇ ಕೋರ್ಟ್ ಆದೇಶ ಬರುವವರೆಗೆ ರಜೆ ಕೊಡಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಈ ಸಂದರ್ಭ ಶಾಸಕ ಯುಟಿ ಖಾದರ್ ಕಾಲೇಜಿಗೆ ಭೇಟಿ ನೀಡಿ, ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ, ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ವಿದ್ಯಾಭ್ಯಾಸ ಹಾಳಾಗಬಾರದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳಳಬೇಕು ಎಂದರು.ಎಲ್ಲವೂ ಸರಿ ಹೋಗುವ ವರೆಗೆ ಪಿಯು ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ ಆಕ್ರೋಶಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದು, ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದೆ.
ಏನಿದು ಪ್ರಕರಣ?
ದಕ್ಷಿಣಕನ್ನಡ ಜಿಲ್ಲೆಯಲ್ಲೂ ಇದೀಗ ಹಿಜಬ್ ವಿವಾದ ಹೆಚ್ಚಾಗುವ ಸಾಧ್ಯತೆಗಳು ಕಾಣ ಸಿಕ್ಕಿದ್ದು, ಇದೀಗ ಕೋಮು ಸೂಕ್ಷ್ಮ ಪ್ರದೇಶ ಉಳ್ಳಾಲಕ್ಕೂ ಹಬ್ಬಿದೆ. ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಬಂದ ಹಿನ್ನಲೆ ಉಳ್ಳಾಲದ ಭಾರತ್ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿನಿಯರಿಗೆ ಹಿಜಬ್ ಧರಿಸಿ ತರಗತಿ ಪ್ರವೇಶಕ್ಕೆ ನಿರಾಕರಿಸಲಾಗಿದೆ.
ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿದ್ದರು. ಈ ವೇಳೆ ಶಿಕ್ಷಕಿ ತರಗತಿಗೆ ಹಾಜರಾದ ಸಂದರ್ಭದಲ್ಲಿ ಹಿಜಾಬ್ ಧರಿಸಬಾರದು ಎಂದು ಸರ್ಕಾರ ದ ಆದೇಶ ಇದೆ. ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಈ ಕಾರಣದಿಂದ ಹಿಜಾಬ್ ಧರಿಸದೆ ಬರುವಂತೆ ಸೂಚಿಸಿದರು ಎನ್ನಲಾಗಿದೆ.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು ಈ ವಿಚಾರ ನಮ್ಮಲ್ಲಿ ಹೇಳುವುದು ಅಲ್ಲ, ಪೋಷಕರಲ್ಲಿ ಹೇಳಬೇಕು ಎಂದಿದ್ದಾರೆ.
ಈ ವೇಳೆ ಹಾಜರಾದ ಆಡಳಿತ ಮಂಡಳಿ ಹಿಜಾಬ್ ಧರಿಸಿ ತರಗತಿಗೆ ಬರಲು ಅವಕಾಶ ಇಲ್ಲ ಎಂದು ಹೇಳಿದ್ದು ಇದರಿಂದ ಕೆಲವು ವಿದ್ಯಾರ್ಥಿನಿಯರು ತರಗತಿಯಿಂದ ಹೊರ ಬಂದು ನ್ಯಾಯಕ್ಕಾಗಿ ಹೋರಾಟ ನಡೆಸಿದರು.