Ukraine Russia Conflict: (ಫೆ. 23): ಉಕ್ರೇನ್‌ಗೆ ಸೇನೆ ನುಗ್ಗಿಸಲು ರಷ್ಯಾ ಆದೇಶ ನೀಡಿದೆ. ಉಭಯ ದೇಶಗಳ ನಡುವೆ ಬಹುನಿರೀಕ್ಷಿತ ಯುದ್ಧ ಬಹುತೇಕ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪೂರ್ವ ಉಕ್ರೇನ್‌ಗೆ ಸೇನೆಯನ್ನು ಕಳುಹಿಸುವ ಆದೇಶಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದಾರೆ.ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರಾತ್ರೋರಾತ್ರಿ ತುರ್ತು ಸಭೆ ನಡೆಸಿದೆ. ಇನ್ನೂ, ಉಕ್ರೇನ್ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ, ‘ನಾವು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ’ ಎಂದು ಸವಾಲು ಹಾಕಿದ್ದಾರೆ.
ಉಕ್ರೇನ್‌ನಲ್ಲಿರುವ ಪ್ರಜೆಗಳ ರಕ್ಷಣೆಗೆ ಭಾರತ ಮುಂದಾಗಿದೆ. ಆ ದೇಶದಲ್ಲಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾದ 3 ವಿಶೇಷ ವಿಮಾನಗಳನ್ನು ನಿಯೋಜನೆ ಮಾಡಿದೆ. ಆದಷ್ಟುಬೇಗ ಉಕ್ರೇನ್ ತೊರೆಯಲು ಪ್ರಜೆಗಳಿಗೆ ಸಲಹೆ ಮಾಡಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಈಗಾಗಲೇ ಯುದ್ಧ ಆರಂಭವಾಗಿದೆ ಅಥವಾ ಯಾವುದೇ ಕ್ಷಣದಲ್ಲಿ ಬೇಕಾದಾದರು ಯುದ್ಧ ಆರಂಭ ಆಗಬಹುದು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಳಿದೆ. ಉಕ್ರೇನ್‌ನ ಭಾಗಗಳನ್ನು ಸ್ವತಂತ್ರವೆಂದು ಗುರುತಿಸುವ ಹಾಗೂ ಅಲ್ಲಿನ ಸ್ವಾಯತ್ತೆ ರಕ್ಷಣೆಗೆ ಮಿಲಿಟರಿ ಸೇರಿದಂತೆ ಎಲ್ಲಾ ನೆರವು ನೀಡುವ ಮೂಲಕ ಶಾಂತಿ ಕಾಪಾಡುವ ಆದೇಶಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಇದು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡನೆಯಾಗಿ ಕಾಯ್ದೆಯಾಗಲಿದೆ.
ಪೂರ್ವ ಉಕ್ರೇನ್‌ಗೆ ಸೇನೆ ನುಗ್ಗಿಸುವ ಆದೇಶಕ್ಕೆ ರಷ್ಯಾ ಸಹಿ ಹಾಕುತ್ತಿದ್ದಂತೆ ರಷ್ಯಾ ವಿರುದ್ಧ ಬಹಿರಂಗವಾಗಿ ಉಕ್ರೇನ್‌ನ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ, ‘ನಾವು ಯಾರಿಗೂ, ಯಾವುದರ ಬಗ್ಗೆಯೂ ಹೆದರುವುದಿಲ್ಲ. ನಾವು ಯಾರಿಗೂ ಏನನ್ನೂ ಕೊಡಬೇಕಾಗಿಲ್ಲ. ಮತ್ತು ನಾವು ಯಾರಿಗೂ ಏನನ್ನೂ ಕೊಡುವುದಿಲ್ಲ’ ಎಂದು ತಮ್ಮ ದೇಶದ ಪ್ರಜೆಗಳನ್ನು ಉದ್ದೇಶಿಸಿ ಹೇಳಿದ್ದಾರೆ.