ಶಿವಮೊಗ್ಗ: (ಫೆ.23) : Shivamogga Harsha murder: ಬಜರಂಗದಳ ಕಾರ್ಯಕರ್ತ ಹರ್ಷ ಅವರ ಕೊಲೆಯ ನಂತರ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನಿಷೇಧಾಜ್ಞೆಯೂ ಮುಂದುವರಿದಿದ್ದು, ಸದ್ಯದ ಪರಿಸ್ಥಿತಿ ಬೂದಿಮುಚ್ಚಿದ ಕೆಂಡಂದಂತಾಗಿದೆ. ಈವರೆಗೆ 12 ಜನರನ್ನು ಬಂಧಿಸಲಾಗಿದ್ದು, ನಿಷೇಧಾಜ್ಞೆ ಮುಂದುವರಿದೆ. ಈ ನಡುವೆ ಪರಿಸ್ಥಿತಿಯನ್ನು ಮತ್ತಷ್ಟು ನಿಯಂತ್ರಣಕ್ಕೆ ತರಲು ಕಣ್ಗಾವಲಿಗಾಗಿ ಡ್ರೋಣ್ (drone camera) ಬಳಕೆ ಮಾಡಲಾಗುತ್ತಿದೆ.

ಇದೀಗ ಹೆಚ್ಚಿನ ಭದ್ರತೆಗೆ ಮಲೆನಾಡು ಶಿವಮೊಗ್ಗಕ್ಕೆ ನಕ್ಸಲ್ ನಿಗ್ರಹ ದಳ ಆಗಮಿಸಿದೆ. ಉಡುಪಿ (Udupi district) ಜಿಲ್ಲೆ ಕಾರ್ಕಳದ (ANF) ಕ್ಯಾಂಪ್ ನಿಂದ ನಕ್ಸಲ್ ನಿಗ್ರಹ ದಳ ಬಂದಿದ್ದು ಸುಸಜ್ಜಿತ 2 ಡ್ರೋನ್ ಕ್ಯಾಮರಾವನ್ನು ತರಲಾಗಿದೆ. ಡ್ರೋನ್ ಕ್ಯಾಮರಾ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತದೆ. ಜನರ ಚಲನವಲನ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ದಳವನ್ನು ತರಿಸಲಾಗಿದ್ದು ಕಾನೂನಿಗೆ ಧಕ್ಕೆಯಾದರೆ ಅಲ್ಲಿಗೆ ಎಎನ್ಎಫ್ ಹಾಜರಾಗುತ್ತದೆ.
ಶಿವಮೊಗ್ಗ ನಗರದಲ್ಲಿ ಸದ್ಯ ಕರ್ಫ್ಯೂ ಜಾರಿಯಲ್ಲಿದೆ. ಹೀಗಿರುವಾಗ ಯಾರಾದರೂ ಓಡಾಡುವುದು ಕಂಡುಬಂದರೆ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ, ವಾಹನಗಳಿಗೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡಿದರೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗುತ್ತದೆ. ಡ್ರೋನ್ ಹಾರಾಡಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಖುದ್ದು ಜಿಲ್ಲಾಧಿಕಾರಿ ಸೆಲ್ವಮಣಿ (Selva mani) ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಕೂಡ ಸಾಥ್ ನೀಡಿದ್ದಾರೆ.

ಶಿವಮೊಗ್ಗ ಸಿಟಿಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಹಾರಾಟ ಮಾಡಲಿದ್ದು, ಅಲ್ಲಿನ ಸ್ಥಿತಿಗತಿ ಬಗ್ಗೆ ಇದರಿಂದ ಮಾಹಿತಿ ಸಿಗುತ್ತದೆ. ಡ್ರೋನ್ ಗಳನ್ನು ನಗರದ ಸುತ್ತಮುತ್ತ ವಿಚಕ್ಷಣೆಗೆ , ಕಾನೂನು ಸುವ್ಯವಸ್ಥೆಗೆ ತರಿಸಲಾಗಿದೆ. ಜನರು ಹೊರಗೆ ಬಂದು ಗುಂಪು ಸೇರುತ್ತಾರೆಯೇ ಎಂದು ನೋಡಲು ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ತಿಳಿಸಿದ್ದಾರೆ.
14 ಎಫ್ಐಆರ್ ದಾಖಲು:
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಶಿವಮೊಗ್ಗದಲ್ಲಿ ಗಲಭೆ, ಬೆಂಕಿ ಹಚ್ಚುವಿಕೆ ಮತ್ತು ಕಲ್ಲು ತೂರಾಟದ ಘಟನೆಗಳಿಗೆ ಸಂಬಂಧಿಸಿದಂತೆ 14 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ (SP) ಹೇಳಿದ್ದಾರೆ.
ಪರಿಸ್ಥಿತಿ ಶಾಂತ:
ಸದ್ಯ ಶಿವಮೊಗ್ಗದಲ್ಲಿ ಎಲ್ಲವೂ ನಿಯಂತ್ರಣದಲ್ಲಿದೆ, ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಅದಕ್ಕಾಗಿ ನಾನು ಜನರಿಗೆ ಧನ್ಯವಾದ ಹೇಳುತ್ತೇನೆ. ಈ ಸಮಯದಲ್ಲಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.