ಬೆಂಗಳೂರು, (ಫೆ.23): Actor Chetan: ಅಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದ ಮೇರೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನು ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. 8ನೇ ಎಸಿಎಂಎಂ ಕೋರ್ಟ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮಂಗಳವಾರ ತಡರಾತ್ರಿ ಚೇತನ್ ಅವರನ್ನು ವೈಯಾಲಿಕಾವಲ್ ಪೋಲಿಸ್ ಠಾಣೆಯಿಂದ ಶೇಷಾದ್ರಿಪುರಂ ಪೊಲೀಸರು ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಹಿರಿಯ ವಕೀಲ ಬಾಲನ್ ಅವರು ವಾದ ಮಂಡಿಸಿದರು. ಬಳಿಕ 8ನೇ ಎಸಿಎಂಎಂ ಕೋರ್ಟ್ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಬಳಿಕ ಪೊಲೀಸರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಚೇತನ್ ಅವರನ್ನು ಕರೆ ತಂದರು. ಈ ವೇಳೆ ಚೇತನ್ ಅವರು ಜೈಲಿನಲ್ಲಿ ಓದಲು ತಂದ ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ “Annihilation of cast” ಪುಸ್ತಕವನ್ನು ಪ್ರದರ್ಶಿಸಿದರು.
ಕಿಡ್ನ್ಯಾಪಿಂಗ್ ಎಂದು ನಟ ಚೇತನ್ ಪತ್ನಿ ದೂರು
ನ್ಯಾಯಾಂಗವನ್ನು ನಿಂದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬರಹ ಪ್ರಕಟಿಸಿದ ಪ್ರಕರಣದಲ್ಲಿ ನಟ ಚೇತನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದೊಂದು ಅಪಹರಣವೆಂದು ಚೇತನ್ ಪತ್ನಿ ಮೇಘಾ ಆರೋಪಿಸಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಚೇತನ್ ಅವರನ್ನು ಮನೆಯಿಂದ ವಶಕ್ಕೆ ಪಡೆದಿರುವ ಪೊಲೀಸರು, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ‘ಪತಿ ಎಲ್ಲಿದ್ದಾರೆ’ ಎಂಬುದನ್ನು ತಿಳಿಯಲು ಪತ್ನಿ ಮೇಘಾ, ಶೇಷಾದ್ರಿಪುರ ಠಾಣೆಗೆ ಬಂದಿದ್ದಾರೆ.
ಆದರೆ, ಚೇತನ್ ಶೇಷಾದ್ರಿಪುರ ಠಾಣೆಯಲ್ಲಿಲ್ಲ ಎಂಬ ಮಾಹಿತಿ ಮೇಘಾ ಅವರಿಗೆ ಗೊತ್ತಾಗಿದೆ. ಘಟನೆ ಬಗ್ಗೆ ವಿಡಿಯೊ ಹರಿಬಿಟ್ಟಿರುವ ಮೇಘನಾ, ‘ಪೊಲೀಸರೆಂದು ಹೇಳಿಕೊಂಡು ಮನೆಗೆ ಬಂದಿದ್ದ ಕೆಲವರು, ಚೇತನ್ ಅವರನ್ನು ಕರೆದೊಯ್ದಿದ್ದಾರೆ. ಅವರು ಈಗ ಎಲ್ಲಿದ್ದಾರೆಂಬುದನ್ನು ಯಾರೂ ಹೇಳುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ.
‘ಚೇತನ್ ಹಾಗೂ ಅವರ ಅಂಗರಕ್ಷಕನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದೊಂದು ಷಡ್ಯಂತ್ರದಂತೆ ಕಾಣುತ್ತಿದೆ’ ಎಂದೂ ದೂರಿದ್ದಾರೆ.