ಬೆಂಗಳೂರು: (ಫೆ.22) Double Murder: ಕೌಟುಂಬಿಕ ಕಾರಣಕ್ಕಾಗಿ ನಗರದ ಮನೆಯೊಂದರಲ್ಲಿ ಪತ್ನಿ ಹಾಗೂ ಅತ್ತೆಯನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಕೃತ್ಯವೆಸಗಿದ ಬಳಿಕ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಲಪಾಳ್ಯದ ಮನೆಯೊಂದರಲ್ಲಿ ದುರ್ಘಟನೆ ಸಂಭವಿಸಿದೆ.
ಪತ್ನಿ ಸುನೀತಾ ಹಾಗೂ ಅತ್ತೆ ಸರೋಜಮ್ಮ ಎಂಬುವರನ್ನು ಕೊಂದ ರವಿ ಕುಮಾರ್ ಪೊಲೀಸರ ಮುಂದೆ ಸೆರೆಂಡರ್ ಆಗಿದ್ದಾನೆ. ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯ ರವಿ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಆರು ತಿಂಗಳ ಹಿಂದಷ್ಟೇ ಮೂಡಲಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಎಳನೀರು ವ್ಯಾಪಾರಿಯಾಗಿದ್ದ ನಷ್ಟವಾಗಿದ್ದ ರವಿ ಜೀವನಕ್ಕಾಗಿ ಕಾಂಡಿಮೆಂಟ್ಸ್ ಅಂಗಡಿ ಇಟ್ಟುಕೊಂಡಿದ್ದ. 20 ವರ್ಷಗಳ ಹಿಂದೆ ಸುನೀತಾ ಮದುವೆ ಮಾಡಿಕೊಂಡಿದ್ದ. ಇಬ್ಬರ ಮಕ್ಕಳಿದ್ದಾರೆ.
ಅನೈತಿಕ ಸಂಬಂಧದ ಅನುಮಾನ:
ಅನೋನ್ಯವಾಗಿದ್ದ ಕುಟುಂಬದಲ್ಲಿ ಇತ್ತೀಚೆಗೆ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಅನೈತಿಕ ಸಂಬಂಧ ಹೊಂದಿರುವುದಾಗಿ ಶಂಕಿಸಿ ಆಗಾಗ ಇಬ್ಬರ ನಡುವೆ ಜಗಳವಾಗುತಿತ್ತು ಎನ್ನಲಾಗ್ತಿದ್ದು, ಇದೇ ವಿಚಾರಕ್ಕಾಗಿ ನಿನ್ನೆಯೂ ಸಹ ಗಲಾಟೆಯಾಗಿತ್ತು ಎನ್ನಲಾಗಿದೆ. ಇಂದು ಬೆಳಗ್ಗೆ ಮಕ್ಕಳಿಬ್ಬರನ್ನು ಶಾಲೆಗೆ ಕಳುಹಿಸಿ ಪತ್ನಿಯೊಂದಿಗೆ ಗಲಾಟೆ ತೆಗೆದಿದ್ದಾನೆ. ಮಾತಿನ ಚಕಮಕಿ ಹೆಚ್ಚಾಗಿ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮನೆಯಲ್ಲಿದ್ದ ಎಳನೀರು ಕೊಚ್ಚುವ ಮಚ್ಚಿನಿಂದ ರವಿ ಪತ್ನಿ ಸುನೀತಾ ಕುತ್ತಿಗೆ ಸೀಳಿದ್ದಾನೆ. ಅತ್ತೆ ಸರೋಜಮ್ಮ ಮೇಲೆ ಮಚ್ಚು ಬೀಸಿದ್ದಾನೆ. ರಕ್ತಸ್ರಾವಗೊಂಡು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.
ಕೃತ್ಯ ಬಳಿಕ ಗೋವಿಂದರಾಜನಗರ ಪೊಲೀಸರ ಮುಂದೆ ಹಾಜರಾಗಿ ಹತ್ಯೆ ಬಗ್ಗೆ ಮಾಹಿತಿ ನೀಡಿ ಸರೆಂಡರ್ ಆಗಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತದೇಹಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ತನಿಖೆ ಕೈಗೊಂಡಿದ್ದಾರೆ.