ಶಿವಮೊಗ್ಗ: (ಫೆ.21) Shivamogga Murder: ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಿಂದೂ ಕಾರ್ಯಕರ್ತನನ್ನು ಕೊಚ್ಚಿ ಕೊಚ್ಚಿ ಕೊಲೆಗೈದು ಎಸ್ಕೇಪ್ ಆಗಿದ್ದಾರೆ.ಶಿವಮೊಗ್ಗದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಬಡಾವಣೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.ಕಾರಿನಲ್ಲಿ ಬಂದಿದ್ದ 4ರಿಂದ 6 ಜನರ ಗುಂಪು, ಬಜರಂಗದಳ ಕಾರ್ಯಕರ್ತ ಹರ್ಷ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಹರ್ಷ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದರು. ಯುವಕನನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಿಗೇಹಟ್ಟಿ ಬಡಾವಣೆ ನಿವಾಸಿಯಾಗಿದ್ದ ಹರ್ಷ, 5 ವರ್ಷಗಳಿಂದ ಭಜರಂಗದಳದ ಸಕ್ರಿಯ ಕಾರ್ಯಕರ್ತನಾಗಿದ್ದರು.ಈ ಹಿಂದೆ ಎರಡು ಬಾರಿ ಈತನ ಮೇಲೆ ಆಕ್ರಮಣ ಮಾಡಲಾಗಿತ್ತು. ನಿನ್ನೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು, ಹರ್ಷನ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.ಮಾರಕಾಸ್ತ್ರ ಗಳಿಂದ ದಾಳಿ ಮಾಡಿ ಓಡಿಹೋಗಿದ್ದಾರೆ.

ಸೀಗೆಹಟ್ಟಿ ಬಡಾವಣೆ ಮತ್ತು ಅಕ್ಕಪಕ್ಕದ ಬಡಾವಣೆ ನಿವಾಸಿಗಳು ಸುದ್ದಿ ತಿಳಿದ ಕೂಡಲೇ, ರವಿವರ್ಮ ಬೀದಿ, ಕಲರ್ ಪೇಟೆ, ಶಾಮರಾವ್ ಬೀದಿ ಸೀಗೆಹಟ್ಟಿ ಸೇರಿ ವಿವಿಧ ಬಡಾವಣೆಯಲ್ಲಿ 2 ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆದಿದೆ.ಪರಿಸ್ಥಿತಿ ನಿಭಾಯಿಸಲು ಪೋಲಿಸರು ಲಾಠೀ ಚಾರ್ಚ್ ಮಾಡಿದ್ದಾರೆ.
ಇಂದು ನಗರದ ಶಾಲಾ-ಕಾಲೇಜುಗಳಿಗೆ ರಜೆ
ಬಜರಂಗದಳದ ಕಾರ್ಯಕರ್ತನ ಸುದ್ದಿ ತಿಳಿದು ಇಡಿ ಮಲೆನಾಡಿನಾದ್ಯಂತ ವಿಷಯ ಹಬ್ಬಿದೆ. ಘಟನಾ ಸ್ಥಳಕ್ಕೆ ಬಂದ ಎಸ್ಪಿ ಲಕ್ಷ್ಮಿಪ್ರಸಾದ್ ಮತ್ತು ಡಿಸಿ ಡಾ. ಸೆಲ್ವಮಣಿ ಪರಿಶೀಲನೆ ನಡೆಸಿದ್ದಾರೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗಾಟ ಜೋರಾಗಿದೆ.ಮುಂಜಾಗ್ರತಾ ಕ್ರಮವಾಗಿ ಇಂದು ಶಿವಮೊಗ್ಗ ನಗರದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ ಮಾಡಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದು ಡಿಸಿ ಹೇಳಿದ್ದಾರೆ.