ಮೈಸೂರು: (ಫೆ.19): Humanity: ಹಿಜಾಬ್ ವಿವಾದದ ನಡುವೆ ಮಾನವೀಯತೆ ಮೆರೆಯುವ ಮೂಲಕ ಮೈಸೂರು ಜಿಲ್ಲೆಯ ಮುಸ್ಲಿಂ ಕುಟುಂಬವೊಂದು ಸಮಾಜಕ್ಕೆ ಮಾದರಿಯಾಗಿದೆ. ಜೊತೆಗೆ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎನ್ನುವ ಸಂದೇಶವನ್ನೂ ಸಾರಿದೆ.
ರಾಜ್ಯದ ಬಹುತೇಕ ಜಿಲ್ಲೆಗಳನ್ನು ಹಿಜಾಬ್- ಕೇಸರಿ ಶಾಲು(hijab-saffron controversy.) ವಿವಾದ ಹಬ್ಬಿರುವ ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ (HD Kote Taluk) ತಾಲೂಕಿನ ಹಳ್ಳಿಯೊಂದರ ಮುಸ್ಲಿಂ ಕುಟುಂಬವೊಂದು ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶಕ್ಕಾಗಿ ಸರ್ಕಾರಿ ಶಾಲೆಗೆ 2.5 ಎಕರೆ ಜಮೀನನ್ನು(Donate 2.5 acres of land) ದಾನ ಮಾಡಿದೆ.
ತಂದೆಯ ಕನಸು ನನಸು ಮಾಡಿದ ಪುತ್ರ
ಅಕ್ಕಪಕ್ಕದ ಗ್ರಾಮಗಳ ಮಕ್ಕಳ ಶೈಕ್ಷಣಿಕ ಅಗತ್ಯತೆ ಹಾಗೂ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಜಮೀನು ನೀಡುವುದಾಗಿ ವಾಗ್ದಾನ ಮಾಡಿದ್ದ ಮಾರ್ಚಳ್ಳಿ ಗ್ರಾಮದ ಮಹಮ್ಮದ್ ಜಾಫರ್ ಅವರ ಕನಸನ್ನು, ತಂದೆ ತೀರಿದ ಬಳಿಕ ಅವರು ಮಕ್ಕಳು ನನಸಾಗಿಸಿದ್ದಾರೆ. ಇದೀಗ ಸುಮಾರು 50 ಲಕ್ಷ ರೂ.ಕ್ಕಿಂತ ಹೆಚ್ಚು ಬೆಲೆ ಬಾಳುವ ಜಮೀನನ್ನು ಸರ್ಕಾರಿ ಶಾಲೆಗೆ ದಾನ ಮಾಡಿದ್ದಾರೆ.

ಈ ಭೂಮಿಯನ್ನು ಬಾಚೇಗೌಡನಹಳ್ಳಿಯ(Bachegowdana halli) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಲಾಗಿದ್ದು, ಮುಖ್ಯೋಪಾಧ್ಯಾಯರ ಹೆಸರಿಗೆ ನೋಂದಣಿ ಮಾಡಲಾಗಿದೆ. ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ತರಗತಿ ಕೊಠಡಿಗಳ ಕೊರತೆಯಿದ್ದರೆ, ದಾನವಾಗಿ ನೀಡಿದ ಭೂಮಿಯಲ್ಲಿ ಹೊಸ ಕೊಠಡಿಗಳನ್ನು ನಿರ್ಮಿಸಬಹುದು ಅಥವಾ ಮಕ್ಕಳ ಆಟದ ಮೈದಾನವಾಗಿ ಪರಿವರ್ತಿಸಬಹುದು, ಇತರ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಬಹುದು ಎಂಬುದು ಕುಟುಂಬದ ಆಶಯವಾಗಿದೆ.
ಶಾಲೆಗಾಗಿ ಭೂಮಿ ದಾನ:
ಈ ಸಂಬಂಧ ಪ್ರತಿಕ್ರಿಯಿಸಿರುವ ಜಾಫರ್ ಅವರ ಮಗ ಮೊಹಮ್ಮದ್ ರಕೀಬ್ (Zafar’s son Mohammed Rakeeb) ಮಾತನಾಡಿ, ʻನನ್ನ ‘ಅಯ್ಯ’ (ತಂದೆ) ಯಾರೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಮತ್ತು ಈ ಪ್ರದೇಶದಲ್ಲಿ ಸಾಕ್ಷರತೆಯ ಪ್ರಮಾಣವನ್ನು ಸುಧಾರಿಸಲು ಶಾಲೆಗೆ ಭೂಮಿಯನ್ನು ದಾನ ಮಾಡುವುದಾಗಿ ಮಾತು ನೀಡಿದ್ದರು.
ನಾವು 6 ಮಂದಿ ಒಡಹುಟ್ಟಿದವರು — 4 ಸಹೋದರರು ಮತ್ತು ಇಬ್ಬರು ಸಹೋದರಿಯರು. ನಮ್ಮ ತಂದೆಯ ಇಚ್ಛೆಯಂತೆ ನಾವು ಚರ್ಚಿಸಿ 2.5 ಎಕರೆಯನ್ನು ನೀಡಲು ನಿರ್ಧರಿಸಿದ್ದೇವೆ. ಫೆಬ್ರವರಿ 15ರಂದು ನಾವು ಶಾಲೆಯ ಹೆಸರಿಗೆ ಜಮೀನನ್ನು ನೋಂದಾಯಿಸಿದ್ದೇವೆ. ಕೃಷಿಯಲ್ಲಿ ತೊಡಗಿರುವ ನಮ್ಮ ಕುಟುಂಬವು ಗ್ರಾಮದಲ್ಲಿ 12 ಎಕರೆಗೂ ಹೆಚ್ಚು ಜಮೀನು ಹೊಂದಿದ್ದು, ಅದರಲ್ಲಿ 2.5 ಎಕರೆಯನ್ನು ದಾನ ಮಾಡಿದೆʼ ಎಂದು ಹೇಳಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಎಚ್.ಡಿ.ಕೋಟೆ ಬ್ಲಾಕ್ ಶಿಕ್ಷಣಾಧಿಕಾರಿ ಚಂದ್ರಕಾಂತ್, ʻದಾನವಾಗಿ ನೀಡಿದ ಜಮೀನನ್ನು ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಹಾಗೂ ಅಗತ್ಯವಿದ್ದಲ್ಲಿ ಹೊಸ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು. ಕುಟುಂಬದ ಈ ನಡೆ ಅನುಕರಣೀಯವಾಗಿದೆ. ಸಹಾಯ ಮಾಡಲು ಇತರರನ್ನು ಪ್ರೇರೇಪಿಸುತ್ತದೆʼ ಎಂದಿದ್ದಾರೆ.
ಇದನ್ನು ಓದಿ:ವಸ್ತ್ರ ಸಂಹಿತೆ ವಿಚಾರವಾಗಿ ಹೈ ಕೋರ್ಟ್ ನಿರ್ಧಾರ ಪಾಲನೆ ಮಾಡಬೇಕು | Secular Tv