ಬೆಂಗಳೂರು: (ಫೆ.18): BJP SC Yuva Morcha: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವಂತೆ ಮುಂಬರುವ ಬಜೆಟ್ನಲ್ಲಿ ಸೇರಿಸಲು ಬಿಜೆಪಿ ಎಸ್ ಸಿ ಮೋರ್ಚಾ ವತಿಯಿಂದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ರವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಬಿ.ಜೆ.ಪಿ ಎಸ್.ಸಿ ಮೋರ್ಚಾ ವತಿಯಿಂದ ಶಾಸಕರ ಭವನದಲ್ಲಿ ರಾಜ್ಯ ಮಟ್ಟದ ಬಜೆಟ್ ಪೂರ್ವಭಾವಿ ಸಂವಾದದಲ್ಲಿ ಪರಿಶಿಷ್ಟ ಜಾತಿ/ವರ್ಗಗಳ ಹಿರಿಯ ಅಧಿಕಾರಿಗಳು, ಶಿಕ್ಷಣ ತಜ್ಞರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ಪಕ್ಷದ ಮುಖಂಡರುಗಳು ಸವಿವರವಾಗಿ ಚರ್ಚಿಸಿ ಪರಿಶಿಷ್ಟ ಜಾತಿ/ವರ್ಗಗಳ ಹಿತದೃಷ್ಟಿಯಿಂದ ಮತ್ತು ಪಕ್ಷದ ಸಂಘಟನೆಯ ದೃಷ್ಟಿಯಿಂದ 2022-23ರ ಆಯ-ವ್ಯಯ ಪತ್ರದಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲು ತಮ್ಮ ಸಲಹೆಗಳನ್ನು ಈ ಕೆಳಕಂಡಂತೆ ನೀಡಿರುತ್ತಾರೆ ಎಂದು ಗಮನ ಸೆಳೆಯಲಾಯಿತು
ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಬಾಬಾ ಸಾಹೇಬ್‍ರವರ ಪಂಚಪೀಠಗಳ ಮಾದರಿಯಲ್ಲಿ ಬಾಬಾ ಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್‍ರವರು ಕರ್ನಾಟಕಕ್ಕೆ ಪಾದಸ್ಪರ್ಶ ನೀಡಿದ ಸ್ಥಳಗಳಾದ ಬೆಂಗಳೂರು, ಕೆ.ಜಿ.ಎಫ್., ಹಾಸನ, ಗುಲ್ಬರ್ಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿಯೂ ಸ್ಮಾರಕಗಳನ್ನು ನಿರ್ಮಾಣ ಮಾಡಲು ರೂ. 25 ಕೋಟಿ ಹಣವನ್ನು ಆಯವ್ಯಯದಲ್ಲಿ ಮೀಸಲಿಡಲು ಮನವಿ ಮಾಡಲಾಯಿತು.
ಪರಿಶಿಷ್ಟ ಜಾತಿ / ವರ್ಗಗಳ ಗುತ್ತಿಗೆದಾರರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿ ಟೆಂಡರ್‍ನಲ್ಲಿ ನಿಗಧಿಪಡಿಸಿರುವ ರೂ. 50 ಲಕ್ಷದ ಮಿತಿಯಿಂದ ರೂ. ಒಂದು ಕೋಟಿಗೆ ಹೆಚ್ಚಿಸುವುದು, ವೃತ್ತಿಪರ ಕೋರ್ಸ್‍ಗಳಾದ ವೈದ್ಯಕೀಯ, ಇಂಜಿನಿಯರಿಂಗ್ ಕಾನೂನು ಹಾಗೂ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿ / ವರ್ಗಗಳ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಕೋಟಾದಲ್ಲಿ ದಾಖಲಾದ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜು ಶಿಕ್ಷಣಕ್ಕೆ ತಗಲುವ ಸಂಪೂರ್ಣ ಕಾಲೇಜು ಶಿಕ್ಷಣ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಹಾಗೂ ಬದಲಾದ ಬೆಲೆ ಏರಿಕೆ ಆಧರಿಸಿ ಹಾಸ್ಟಲ್‍ನ ಸೌಲಭ್ಯವನ್ನು ಹೆಚ್ಚಿಸುವುದು. ಇದಕ್ಕಾಗಿ ಎಸ್.ಸಿ.ಪಿ/ ಟಿ.ಎಸ್.ಪಿ ಯೋಜನೆಯಡಿಲ್ಲಿ ಯಲ್ಲಿ ರೂ. 1000 ಕೋಟಿ ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಡಬೇಕು ಎಂದು ಕೋರಲಾಗಿದೆ.
ನಿರುದ್ಯೋಗ ಭತ್ಯೆ
ಪರಿಶಿಷ್ಟ ಜಾತಿ/ವರ್ಗದ ಪದವಿಧರರಿಗೆ ಹರಿಯಾಣ ಮತ್ತು ಇನ್ನಿತರೇ ರಾಜ್ಯದಲ್ಲಿ ನೀಡುತ್ತ ಇರುವಂತೆ ನಿರುದ್ಯೋಗ ಭತ್ಯೆಯನ್ನು ನೀಡುವುದು ಎಂದು ಮನವಿ ತಿಳಿಸಿದ್ದು, ಕಾಂಗ್ರೆಸ್ ಈ ವಿಚಾರವನ್ನು ಚುನಾವಣಾ ವಿಚಾರವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
ಸರ್ಕಾರ ದಲಿತ ನಿರ್ಗತಿಕರಿಗೆ ಮನೆ ಕಟ್ಟಲು ನೀಡುತ್ತಿರುವ 1.75ಲಕ್ಷ ರೂ ಯಾವುದಕ್ಕೂ ಸಾಲದು ಕಾರಣ ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಪ್ರಸ್ತಾವನೆಯಂತೆ 5 ಲಕ್ಷ ಹಣ ಯಥಾವತ್ತಾಗಿ ಕೊಡುವಂತೆ ಬಜೆಟ್‍ನಲ್ಲಿ ಘೋಷಿಸಬೇಕು.
ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಟಿ, ಬಿಟಿ ಸ್ಟಾರ್ಟಪ್ ಗಳನ್ನು ಸ್ಥಾಪಿಸಲು ರೂ.100/- ಕೋಟಿ ಹಣವನ್ನು ಆಯವ್ಯಯದಲ್ಲಿ ಮೀಸಲಿಡುವುದು; ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಐಟಿ/ ವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸ್‍ಗಳಿಗೆ ಕೇಂದ್ರಗಳನ್ನು ತೆರೆಯುವುದು ಅಥವಾ ಖಾಸಗಿ ಸಂಸ್ಥೆಗಳೊಡನೆ ಒಡಂಬಡಿಕೆ ಮಾಡಿಕೊಳ್ಳುವುದು. ಅಲ್ಲದೇ 4 ಕಂದಾಯ ವಿಭಾಗಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ತೆರೆಯುವಂತೆ ವಿನಂತಿಸಲಾಯಿತು.

ಬಡ್ಡಿರಹಿತ ಸಾಲ
ಪರಿಶಿಷ್ಟ ಜಾತಿ / ವರ್ಗಗಳ ಉದ್ದಿಮೆದಾರರಿಗೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಮತ್ತು ಸಣ್ಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕೈಗಾರಿಕಾ ಭೂಮಿ/ಶೆಡ್‍ಗಳನ್ನು ಮೀಸಲಿರಿಸುವುದು. ಹಂಚಿಕೆ ಮಾಡಲಾದ ನಂತರ ಕಂತುಗಳ ಮೇಲೆ ವಿಧಿಸುವ ಶೇ. 10 ಬಡ್ಡಿಯನ್ನು ತೆಗೆದುಹಾಕುವುದು. ಕರ್ನಾಟಕ ಹಣಕಾಸು ಸಂಸ್ಥೆಯಿಂದ ಬಡ್ಡಿರಹಿತ ಸಾಲವನ್ನು ದೊರಕಿಸುವಂತೆ ಕಾರ್ಯಕ್ರಮ ರೂಪಿಸಬೇಕು, ಆಯ-ವ್ಯಯದಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟ ಯೋಜನೆಯ ಹಣವನ್ನು ಬೇರೆ ಕಾರ್ಯಗಳಿಗೆ ವರ್ಗಾಯಿಸುವುದಾಗಲೀ ಅಥವಾ ಉಳಿಸಿಕೊಳ್ಳುವುದಾಗಲೀ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಉಪಯೋಜನೆಯನ್ನು (ಎಸ್.ಸಿ.ಪಿ) ಹಾಗೂ ಬುಡಕಟ್ಟು ಉಪಯೋಜನೆ (ಟಿ.ಎಸ್.ಪಿ) ಕಾಯ್ದೆಯ ಕಾನೂನಿನಡಿಯಲ್ಲಿ ಕ್ರಮ ತೆಗೆದುಕೊಳ್ಳುವುದು ಹಾಗೂ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಕಾಯ್ದೆಯ ಕಲಂ 7ಡಿ ಯನ್ನು ತೆಗೆದು ಹಾಕಲು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಯಿತು.
ಮನೆ ಮಂಜೂರಾತಿ,ಹಕ್ಕು ಪತ್ರ
ಕರ್ನಾಟಕ ಭೂಕಂದಾಯ ಅಧಿನಿಯಮ ಕಲಂ 94ರ ತಿದ್ದುಪಡಿಯಂತೆ, ನಮೂನೆ 50, 53 ಮತ್ತು 57ರಡಿಯಲ್ಲಿ ಬಾಕಿ ಇರುವ ಸುಮಾರು 8 ಲಕ್ಷ ಅರ್ಜಿಗಳನ್ನು ಬಗರ್ ಹುಕ್ಕುಂ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಕರ್ನಾಟಕ ಕಂದಾಯ ಅಧಿನಿಯಮ 1966ರ ನಿಯಮ97(4) ತಿದ್ದುಪಡಿ ಮಾಡಿ ಒಂದು ಬಾರಿಗೆ ವಿನಾಯಿತಿ ನೀಡಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಭೂ ಮಂಜೂರಾತಿಗೆ ಪರಿಗಣಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಕರ್ನಾಟಕ ಭೂಕಂದಾಯ ಅಧಿ ನಿಯಮ ಕಲಂ 94ಸಿ ಮತ್ತು 94ಸಿಸಿ ರಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಅರ್ಜಿ ಸಲ್ಲಿಸಿ ಬಾಕಿ ಇರುವ ಸುಮಾರು 8.68 ಲಕ್ಷ ವಸತಿರಹಿತ ಎಲ್ಲಾ ವರ್ಗದ ಬಡವರು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಸಮುದಾಯದ ಜನರಿಗೆ ಆದ್ಯತೆ ಮೇರೆಗೆ ಸಕ್ರಮ ಗೊಳಿಸಿ ಮನೆ ಮಂಜೂರಾತಿ ಮಾಡಿ ಹಕ್ಕು ಪತ್ರ ಕೊಡುವಂತೆ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಲು ಕೋರುವುದಾಗಿ ಮನವಿ ತಿಳಿಸಿದೆ.
ಸರ್ವೋಚ್ಛ ನ್ಯಾಯಾಲಯದ ಪ್ರಕರಣ ನೆಕ್ಕುಂಟಿರಾಮಲಕ್ಷ್ಮಿ ವಿರುದ್ದ ಕರ್ನಾಟಕ ಸರ್ಕಾರ ಸಿವಿಲ್ ಪ್ರಕರಣ ಸಂಖ್ಯೆ 1390/2009 ದಿನಾಂಕ 26.10.2017ರ ಆದೇಶದ ವಿರುದ್ದರಾಜ್ಯ ಸರ್ಕಾರದ ಪರವಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಹಾಗೂ ವಿಶೇಷ ಕಾಯ್ದೆಗಳಿಗೆ ಕಾಲಮಿತಿ ಕಾಯ್ದೆ ಅನ್ವಯಯವಾಗುವುದಿಲ್ಲವೆಂಬ ಸುಗ್ರೀವಾಜ್ಞೆಯನ್ನು ಹೊರಡಿಸಲು ಕೋರಲಾಯಿತು. ಪರಿಶಿಷ್ಟ ಜಾತಿಯ ಅನ್ಯ ಸಮುದಾಯಗಳಿಗೆ ನೀಡಿದಂತೆ ಛಲವಾದಿ, ಕೊರಮ, ಕೊರಚ ಜಾತಿಗಳಿಗೆ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಮನವಿ ಮಾಡಲಾಯಿತು.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ನಂಜುಂಡಸ್ವಾಮಿ, ಎಸ್.ಸಿ. ಮೋರ್ಚಾ ರಾಜ್ಯ ಖಜಾಂಚಿಗಳಾದ ದೇವನಹಳ್ಳಿ ನಾಗೇಶ್, ಎಸ್.ಸಿ. ಮೋರ್ಚಾ ಕಾರ್ಯದರ್ಶಿಗಳಾದ ವೆಂಕಟೇಶ್ ದೊಡ್ಡೇರಿ ಮತ್ತು ಮುಖಂಡರು ಉಪಸ್ಥಿತರಿದ್ದರು.
ಇದನ್ನು ಓದಿ:K.S Eshwarappa: ರಾಜಿನಾಮೆ ಗೌರವಯುತ ಪದ, ರಾಷ್ಟ್ರದ್ರೋಹಿ ಈಶ್ವರಪ್ಪ ವಜಾಮಾಡಿ: ಡಿ.ಕೆ ಶಿವಕುಮಾರ್