ಬೆಂಗಳೂರು: (ಫೆ.18): ಬಿಜೆಪಿಯವರಿಗೆ ರಾಷ್ಟ್ರಧ್ವಜ ಎಂದರೇನೇ ಗೊತ್ತಿಲ್ಲ. ಅವರು ನಮ್ಮ ತಂದೆ, ತಾಯಿ ಎಂದೆಲ್ಲ ಮಾತನಾಡುತ್ತಾರಲ್ಲ ನಾವು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್‌ನವರು ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಸಿಎಂ ಆಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದೆ. ರಾಷ್ಟ್ರದ್ರೋಹಿ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಹಿನ್ನಲೆ ಕಾಂಗ್ರೆಸ್ ನಾಯಕರು ಸದನದಲ್ಲೆ ಅಹೋ ರಾತ್ರಿ ಧರಣಿ ನಡೆಸಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹೆಚ್.ಕೆ.ಪಾಟೀಲ್, ಈಶ್ವರ ಖಂಡ್ರೆ, ಎನ್.ಎ.ಹ್ಯಾರಿಸ್, ಅಜಯ್ ಸಿಂಗ್, ರಮೇಶ್ ಕುಮಾರ್, ಸೌಮ್ಯಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ರೂಪಾ ಶಶಿಧರ್, ಕುಸುಮಾ ಶಿವಳ್ಳಿ ಸೇರಿದಂತೆ ಸದನದಲ್ಲೇ ಹಲವು ಕಾಂಗ್ರೆಸ್ ನಾಯಕರು ಇಡೀ ರಾತ್ರಿ ಕಳೆದಿದ್ದಾರೆ.
ಈಶ್ವರಪ್ಪ ತಲೆದಂಡ ಮಾಡಲೇಬೇಕೆಂದು ಪಣ ತೊಟ್ಟಿರೋ ಕಾಂಗ್ರೆಸ್ ನಾಯಕರು, ನಿನ್ನೆ ಮಧ್ಯಾಹ್ನದ ವರೆಗೂ ನಡೆದ ಕಲಾಪದಲ್ಲಿ ಈಶ್ವರಪ್ಪ ರಾಜೀನಾಮೆಯನ್ನೂ ಕೊಡ್ಲಿಲ್ಲ. ಕ್ಷಮೆಯನ್ನೂ ಯಾಚಿಸಲಿಲ್ಲ. ಇದರಿಂದ ಕೋಪಗೊಂಡ ಕಾಂಗ್ರೆಸ್ ನಾಯಕರು ಅಹೋರಾತ್ರಿ ಧರಣಿ ನಡೆಸಿದರು.

ಸಿಎಂ, ಗವರ್ನರ್ ಈಶ್ವರಪ್ಪರನ್ನು ವಜಾ ಮಾಡಬೇಕು: ಡಿ.ಕೆ ಶಿವಕುಮಾರ್
ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನಮಗೆ ಬೇಕಾಗಿಲ್ಲ. ಸಿಎಂ, ಗವರ್ನರ್ ಈಶ್ವರಪ್ಪರನ್ನು ವಜಾ ಮಾಡಬೇಕು. ರಾಜೀನಾಮೆ ಎಂಬುದು ಬಹಳ ಗೌರವಯುತವಾದ ಪದ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದರು.
ದೊಡ್ಡ ಆಸ್ತಿವಂತ ಎಂದು ಬಿಜೆಪಿ ಈಶ್ವರಪ್ಪರನ್ನ ಸ್ವೀಕರಿಸುತ್ತಿದೆ. ಬಿಜೆಪಿಯವರಿಗೆ ರಾಷ್ಟ್ರಧ್ವಜ ಎಂದರೇನೇ ಗೊತ್ತಿಲ್ಲ. ಕಾಂಗ್ರೆಸ್‌ನವರು ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಸಿಎಂ ಆಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದೆ. ರಾಷ್ಟ್ರದ್ರೋಹಿ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ. ಸೋಮವಾರ ಎಲ್ಲ ತಾಲೂಕು ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂದೇಶ ಕೊಡುತ್ತೇನೆ. ರಾಷ್ಟ್ರಧ್ವಜ ಹಿಡಿದು ಪ್ರತಿಭಟಿಸುವಂತೆ ಸಂದೇಶ ಕೊಡುತ್ತೇನೆ ಎಂದರು.
ಯು.ಟಿ. ಖಾದರ್ ಅವರು ಮಾತನಾಡಿ, ಇವತ್ತು ಕೂಡಾ ಅಹೋ ರಾತ್ರಿ ಧರಣಿ ನಡೆಸಲು ಸಿಎಲ್ಪಿ ಅಧ್ಯಕ್ಷರು ನಿರ್ಧಾರ ಮಾಡಿದ್ದಾರೆ. ಎರಡು ದಿವಸಗಳ ಕಾಲ ಅವಕಾಶ ಕೊಟ್ಟಿದ್ದೆವು. ಈ ಸರ್ಕಾರ ಭಾರತ ಧ್ವಜಕ್ಕೆ ಮಾಡಿರುವ ಅವನಮಾನ ಇದು. ಈ ರೀತಿ ಮಾಡಿದ್ರೂ ಸರ್ಕಾರ ಭಾರತ ಜನಕ್ಕೆ ಕ್ಷಮೆ ಕೂಡ ಕೇಳಲಿಲ್ಲ ಎಂದರು.

ಸಚಿವ ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ಹೋರಾಟ
ಅವರಿಗೆ ರಾಷ್ಟ್ರ, ರಾಷ್ಟ್ರಧ್ವಜ, ಸಂವಿಧಾನದ ಬಗ್ಗೆ ಗೌರವ ಇಲ್ಲ. ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾದವರಲ್ಲ. RSSನವರು ಮೊದಲೂ ಸಂವಿಧಾನವನ್ನು ವಿರೋಧಿಸಿದ್ದರು. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ರು.
ಬಿಜೆಪಿಯವರಿಗೆ ಒಂದು ರೀತಿಯ ಹಠ. ಏನೇ ಮಾಡಿದ್ರೂ ಜನರು ಒಪ್ಪಿಕೊಳ್ಳುತ್ತಾರೆಂಬ ಭಾವನೆ. ನಾವು ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಕೈಬಿಡಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇದನ್ನು ಓದಿ:Invest in Karnataka:ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ಕಂಪನಿಗಳಿಗೆ ನಿರಾಣಿ ಆಹ್ವಾನ