Russia – Ukraine War: (ಫೆ.17):ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧವಾಗುವ ಸಾಧ್ಯತೆ ಹೆಚ್ಚುತ್ತಿರುವ ನಡುವೆಯೇ, ದೇಶ ತೊರೆಯುವಂತೆ ಉಕ್ರೇನ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯು ಅಲ್ಲಿನ ಭಾರತೀಯರಿಗೆ ಸೂಚನೆ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು, “ಉಕ್ರೇನ್‌ನ ಪ್ರಸ್ತುತ ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು, ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳು, ವಿಶೇಷವಾಗಿ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ದೇಶದಿಂದ ಹೊರಹೋಗುವ ಬಗ್ಗೆ ಯೋಚಿಸಬೇಕು. ಭಾರತೀಯ ಪ್ರಜೆಗಳು ಉಕ್ರೇನ್‌ಗೆ ಅನಗತ್ಯ ಪ್ರಯಾಣದ ಯೋಜನೆಯನ್ನು ರದ್ದುಪಡಿಸಬೇಕು” ಎಂದು ಸಲಹೆ ನೀಡಿದೆ.
“ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳು ರಾಯಭಾರ ಕಚೇರಿಗೆ ತಮ್ಮ ಮಾಹಿತಿಯನ್ನು ನೀಡಬೇಕು. ಇದರಿಂದ ಅಗತ್ಯವಿದ್ದಾಗ ಸಂಪರ್ಕಿಸಲು ಸಾಧ್ಯವಾಗುತ್ತದೆ. ಭಾರತೀಯರಿಗೆ ರಾಯಭಾರ ಕಚೇರಿಯು ಎಲ್ಲ ರೀತಿಯ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸಲಿದೆ” ಎಂದು ಪ್ರಕಟಣೆಯಲ್ಲಿ ರಾಯಭಾರಿ ಕಚೇರಿ ತಿಳಿಸಿದೆ.
ಅಮೆರಿಕ ಕೂಡ ಉಕ್ರೇನ್‌ನಲ್ಲಿರುವ ತನ್ನ ಪ್ರಜೆಗಳಿಗೆ ಮರಳುವಂತೆ ಸೂಚನೆ ನೀಡಿದೆ. “ಉಕ್ರೇನ್‌ನಲ್ಲಿರುವ ಅಮೆರಿಕದ ಪ್ರಜೆಗಳು ಸುರಕ್ಷಿತವಾಗಿ ದೇಶಕ್ಕೆ ವಾಪಸಾಗುವ ಬಗ್ಗೆ ಯೋಚಿಸಬೇಕು” ಎಂದು ಸ್ವತಃ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಷ್ಯಾ ಸೇನಾಪಡೆ ವಾಪಸ್?
ಗಡಿ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಸೇನಾಪಡೆಗಳನ್ನು ವಾಪಸ್ ಪಡೆಯಲಾಗಿದೆ ಎಂದು ರಷ್ಯಾ ಹೇಳಿದೆ. ಆದರೆ ಉಕ್ರೇನ್ ಹಾಗೂ ಅಮೆರಿಕವು ಇದನ್ನು ಅಲ್ಲಗೆಳೆದಿದ್ದು, ಸೂಕ್ತ ಸಾಕ್ಷಿ ಇಲ್ಲದೇ ರಷ್ಯಾ ಮಾತನ್ನು ನಂಬಲಾಗದು ಎಂದು ಹೇಳಿವೆ. ಸೇನಾಪಡೆಗಳನ್ನು ಹಿಂಪಡೆಯಲಾಗಿದೆ ಎಂದು ರಷ್ಯಾ ಹೇಳಿದೆಯಾದರೂ, ಯಾವ ಪ್ರದೇಶದಿಂದ ಹಿಂಪಡೆಯಲಾಗಿದೆ ಹಾಗೂ ಎಷ್ಟು ತುಕಡಿಗಳು ವಾಪಸ್ ಬಂದಿದೆ ಎಂಬ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ. “ಕ್ಷಿಪಣಿ ನಿಯೋಜನೆ ಹಾಗೂ ಮಿಲಿಟರಿ ಪಾರದರ್ಶಕತೆಗೆ ಸಂಬಂಧಿಸಿ ಅಮೆರಿಕ ಹಾಗೂ ನ್ಯಾಟೋ ಜೊತೆ ಮಾತನಾಡಲು ನಾವು ಸಿದ್ಧವಿದ್ದೇವೆ” ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಉಕ್ರೇನ್ ಮೇಲೆ ಸೈಬರ್ ದಾಳಿ!
ಉಕ್ರೇನ್ ರಕ್ಷಣಾ ಸಚಿವಾಲಯ ಹಾಗೂ ಅಲ್ಲಿನ ಎರಡು ಅತಿದೊಡ್ಡ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳ ಮೇಲೆ ಮಂಗಳವಾರ ಸೈಬರ್ ದಾಳಿ ನಡೆದಿದೆ. ಹ್ಯಾಕರ್‌ಗಳು ವೆಬ್‌ಸೈಟ್‌ಗಳನ್ನು ನಿಷ್ಕ್ರಿಯ ಗೊಳಿಸಿದ್ದು, ಇದರ ಹಿಂದೆ ರಷ್ಯಾ ಕೈವಾಡ ಇರುವ ಶಂಕೆಯನ್ನು ಉಕ್ರೇನ್ ವ್ಯಕ್ತಪಡಿಸಿದೆ. ಹಾನಿಗೊಂಡಿರುವ ವೆಬ್‌ಸೈಟ್‌ಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.

ಪರಿಸ್ಥಿತಿ ಎದುರಿಸಲು ಸಿದ್ಧ: ಅಮೆರಿಕ
ರಷ್ಯಾ ಹಾಗೂ ಉಕ್ರೇನ್ ನಡುವಿನ ಕಿತ್ತಾಟಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದು, “ರಷ್ಯಾ ಜೊತೆ ನೇರ ಮಾತುಕತೆಯನ್ನು ಅಮೆರಿಕ ಬಯಸುತ್ತಿಲ್ಲ. ಆದರೆ ಉಕ್ರೇನ್‌ನಲ್ಲಿರುವ ಅಮೆರಿಕದ ಪ್ರಜೆಗಳಿಗೆ ತೊಂದರೆಯಾದರೆ ಅದರ ಪರಿಣಾಮವನ್ನು ರಷ್ಯಾ ಎದುರಿಸಬೇಕಾಗುತ್ತದೆ. ಅತಿರೇಕವನ್ನು ಹತ್ತಿಕ್ಕಲು ಅಮೆರಿಕವು ಜಗತ್ತನ್ನು ಮುನ್ನಡೆಸಬಹುದು. ಎಂತಹದೇ ಪರಿಸ್ಥಿತಿಯನ್ನು ಎದುರಿಸಲು ಅಮೆರಿಕ ಸಿದ್ಧವಾಗಿದೆ” ಎಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾಗೆ ಅಮೆರಿಕ, ನ್ಯಾಟೊ ಅಥವಾ ಉಕ್ರೇನ್ ಬೆದರಿಕೆಯಾಗಿ ಪರಿಣಮಿಸಿಲ್ಲ ಎಂದೂ ಬೈಡನ್ ಅಭಿಪ್ರಾಯ ಪಟ್ಟಿದ್ದಾರೆ.