ಉತ್ತರ ಪ್ರದೇಶ: (ಫೆ.17): Up Well Incident:ಮದುವೆಗೆಂದು ಹೋಗಿದ್ದ 13 ಮಹಿಳೆಯರು ಬಾವಿಗೆ ಬಿದ್ದು ಮೃತಪಟ್ಟಿರುವ ದುರಂತ ಉತ್ತರ ಪ್ರದೇಶದ ಕುಶಿನಗರದ ನೆಬುವಾ ನೌರಂಗಿಯಾದಲ್ಲಿ ನಡೆದಿದೆ. ಬುಧವಾರ ರಾತ್ರಿ ರಾತ್ರಿ 8.30ರ ಹೊತ್ತಿಗೆ ಕುಶಿನಗರದ ನೆಬುವಾ ನೌರಂಗಿಯಾದಲ್ಲಿ ಮದುವೆ ನಡೆಯುತ್ತಿದ್ದ ಮನೆಯೊಂದರಲ್ಲಿ ಈ ಅವಘಡ ನಡೆದಿದೆ.
ಈ ಕುರಿತು ಕುಶಿನಗರ ಜಿಲ್ಲಾಧಿಕಾರಿ ಎಸ್.ರಾಜಲಿಂಗಮ್ ಘಟನೆ ವಿವರಿಸಿದ್ದಾರೆ.ಮದುವೆ ನಡೆಯುತ್ತಿದ್ದ ಈ ಸ್ಥಳದಲ್ಲಿ ಒಂದು ದೊಡ್ಡದಾದ ಬಾವಿಯಿದೆ.ಮೇಲಿಂದ ಸ್ಲ್ಯಾಬ್ ಹಾಕಿ, ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ವಿವಾಹ ಸಮಾರಂಭವಿದ್ದ ಕಾರಣ,ಮಹಿಳೆಯರೆಲ್ಲ ಒಟ್ಟಾಗಿ ಸ್ಲ್ಯಾಬ್ ಮೇಲೆ ಕುಳಿತಿದ್ದಾರೆ.ಬಾವಿಯ ಮೇಲಿನ ಸ್ಲ್ಯಾಬ್ಗೆ ಭಾರ ಹೆಚ್ಚಿ, ಮುರಿದಿದೆ. ಮೇಲೆ ಕುಳಿತಿದ್ದ ಮಹಿಳೆಯರೆಲ್ಲ ಬಾವಿಗೆ ಬಿದ್ದಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ:
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಕುಶಿನಗರದಲ್ಲಿ ನಡೆದ ದುರ್ಘಟನೆ ನಿಜಕ್ಕೂ ಹೃದಯ ಕಲುಕುವಂತಿದೆ. ಮೃತರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಇದರಲ್ಲಿ ಗಾಯಗೊಂಡವರೂ ಇದ್ದು, ಅವರೆಲ್ಲ ಆದಷ್ಟು ಬೇಗ ಗುಣಮುಖರಾಗಲಿ. ಸಂತ್ರಸ್ತರಿಗೆ ಸ್ಥಳೀಯ ಆಡಳಿತ ಸಾಧ್ಯವಿರುವ ಎಲ್ಲ ಸಹಾಯಗಳನ್ನೂ ನೀಡಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ, ಸಂತಾಪ ಸೂಚಿಸಿದೆ. ಮೃತದೇಹಗಳನ್ನು ಹೊರತೆಗೆಯುವ ಕೆಲಸ, ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುವ ಕೆಲಸವನ್ನು ಸೂಕ್ತವಾಗಿ ಮಾಡಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಘಟನೆ ಸಂಬಂಧ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ.