ಬೆಂಗಳೂರು: (ಫೆ.16): Senior Poet Channaveera Kanavi: ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ಅವರ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ,ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಚೆನ್ನವೀರ ಕಣವಿ ಅವರ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ
ಕನ್ನಡ ಕಾವ್ಯಲೋಕದ ಚೆಂಬೆಳಕಾಗಿದ್ದ, ಸೌಹಾರ್ದತೆಯನ್ನು ಸಾರುತ್ತಾ ಸಮನ್ವಯ ಕವಿ ಎಂದೇ ಖ್ಯಾತರಾಗಿದ್ದ ಕವಿ ಚೆನ್ನವೀರ ಕಣವಿ ಅವರ ನಿಧನದಿಂದ ಅತೀವ ದು:ಖಕ್ಕೀಡಾಗಿದ್ದೇನೆ.ಅವರ ಕುಟುಂಬ ವರ್ಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.ಮೃತರ ಆತ್ಮಕ್ಕೆ ಶಾಂತಿ ಸಿಗಲಿ.

ಚೆನ್ನವೀರ ಕಣವಿ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ
ಚೆನ್ನವೀರ ಕಣವಿ ಅವರು, ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದು ಪ್ರಸಿದ್ಧರಾಗಿದ್ದರು. ಕನ್ನಡದ ಖ್ಯಾತ ವಿದ್ವಾಂಸ ಮತ್ತು ಕನ್ನಡದ ಸಮನ್ವಯ, ಸುನೀತ ಕವಿ, ಖ್ಯಾತ ವಿದ್ವಾಂಸರು, ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಾದ ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
‘ಕನ್ನಡದ ಸಾಹಿತ್ಯ ಲೋಕದ ನಕ್ಷತ್ರದಂತಿದ್ದ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಬಹು ದೊಡ್ಡ ನಷ್ಟ ಎಂದು ಅವರು ಹೇಳಿದ್ದಾರೆ.

ವಿಮರ್ಶೆಗಳ ಜತೆಗೆ ಕಾವ್ಯಗಳು, ಸುನೀತಗಳನ್ನು ಬರೆಯುತ್ತಿದ್ದ ಕಣವಿ ಅವರು ಕಾವ್ಯಾಕ್ಷಿ, ಆಕಾಶಬುಟ್ಟಿ, ಹೊಂಬೆಳಕು, ನೆಲ ಮುಗಿಲು ಸೇರಿದಂತೆ ಹತ್ತು ಹಲವು ಕಾವ್ಯ ಸಂಕಲನ ರಚಿಸಿದ್ದಾರೆ.
1996ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕಣವಿ ಅವರು ಸಾಹಿತ್ಯ ಲೋಕದಲ್ಲಿ ಸಲ್ಲಿಸಿದ್ದ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ,ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಅವರ ಮುಕುಟ ಅಲಂಕರಿಸಿದ್ದವು ಎಂದು ಶಿವಕುಮಾರ್ ಅವರು ಸ್ಮರಿಸಿದ್ದಾರೆ.
ಕಣವಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು, ಬಂಧುಗಳು ಹಾಗೂ ಸಾಹಿತ್ಯ ಅಭಿಮಾನಿಗಳಿಗೆ ಅವರ ಅಗಲಿಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಚೆನ್ನವೀರ ಕಣವಿ ಅವರ ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ಸಂತಾಪ:
ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು. ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಕಣವಿಯವರು ಜನಿಸಿದರು. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು ಎಂದು ವಿವರಿಸಿದ್ದಾರೆ.
ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಹಂಪಿ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ ಎಂದು ತಿಳಿಸಿದ್ದಾರೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಬಂಧುಗಳಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ:Channaveera Kanavi:ಚೆಂಬೆಳಕಿನ ಕವಿ ನಾಡೋಜ ಚೆನ್ನವೀರ ಕಣವಿ ಇನ್ನಿಲ್ಲ