Varada: (ಫೆ.15): ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ವರದ” ಚಿತ್ರದ ಟ್ರೇಲರ್ ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಸಹ ಇದೇ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
“ರಾಬರ್ಟ್” ಸಿನಿಮಾ ನಂತರ ನನ್ನ ಅಭಿನಯದ “ವರದ” ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.
ಈ ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳ ಜೊತೆಗೆ, ಕೌಟುಂಬಿಕ ದೃಶ್ಯಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ. ತಂದೆ-ಮಗನ ಬಾಂಧವ್ಯ ಈ ಚಿತ್ರದ ಹೈಲೆಟ್. ನನ್ನ ತಂದೆ ಪಾತ್ರದಲ್ಲಿ ಖ್ಯಾತ ನಟ ಚರಣ್ ರಾಜ್ ಅಭಿನಯಿಸಿದ್ದಾರೆ ಎಂದು ತಿಳಿಸಿದ, ವಿನೋದ್ ಪ್ರಭಾಕರ್ ಈ ಚಿತ್ರದ ಚಿತ್ರೀಕರಣ ಸಮಯದಲ್ಲಿ ತಮ್ಮ ಕಾಲಿಗೆ ಪೆಟ್ಟಾದ ವಿಚಾರವನ್ನು ಹಂಚಿಕೊಂಡರು.

ನಾನು ಚಿತ್ರರಂಗಕ್ಕೆ ಬಂದು ಇಪ್ಪತ್ತೈದು ವರ್ಷಗಳಾಯಿತು. ಆರಂಭದಲ್ಲಿ ತುಂಬಾ ಕಷ್ಟದ ದಿನಗಳನ್ನು ನೋಡಿದ್ದೀನಿ. ಈಗ ಒಂದು ಸಿನಿಮಾ ನಿರ್ಮಾಣ ಮಾಡುವ ಹಂತಕ್ಕೆ ತಲುಪಿದ್ದೇನೆ. ನಿರ್ದೇಶನವನ್ನು ನಾನೇ ಮಾಡಿದ್ದೀನಿ. ನಮ್ಮ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅಮಿತ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಅಭಿನಯ ಚೆನ್ನಾಗಿದೆ . ತಂತ್ರಜ್ಞರ ಕಾರ್ಯವಂತು ಅದ್ಭುತ. ಇದೇ ಹದಿನೆಂಟರಂದು ನಮ್ಮ ಚಿತ್ರ ರಾಜ್ಯಾದ್ಯಂತ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಹಾಗೂ ನಿರ್ಮಾಪಕ ಉದಯ ಪ್ರಕಾಶ್.
ಚಿತ್ರದ ಟ್ರೇಲರ್ ನೋಡಿ ಖುಷಿಯಾಗಿದೆ. ಚಿತ್ರವನ್ನು ನೋಡುವ ಕಾತುರದಲ್ಲಿದ್ದೀನಿ. ನಾನು ಈ ಚಿತ್ರದಲ್ಲಿ “ವರದ” ನ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದೀನಿ. ಚಿತ್ರ ನೋಡಿ ಹರಸಿ ಎಂದರು ನಾಯಕಿ ಅಮಿತ.
ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಿಲ್ ಸಿದ್ದು, ಎಂ.ಕೆ.ಮಠ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ಪ್ರದೀಪ್ ವರ್ಮ ಸೇರಿಯ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್.

ಕೆ.ಕಲ್ಯಾಣ್ , ನಂದೀಶ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕರಾಮ್ ಸಂಭಾಷಣೆ ಬರೆದಿದ್ದಾರೆ. ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ವಿನೋದ್ ಪ್ರಭಾಕರ್, ಚರಣ್ ರಾಜ್, ಅಮಿತ, ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: Senior Actress Bhargavi Narayan:ಹಿರಿಯ ನಟಿ, ರಂಗಕರ್ಮಿ ಭಾರ್ಗವಿ ನಾರಾಯಣ್ ನಿಧನ