Actress Bhargavi Narayan: (ಫೆ.15): ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಕರ್ಮಿ ಭಾರ್ಗವಿ ನಾರಾಯಣ್ (84) ಅವರು ನಿನ್ನೆ ಸಂಜೆ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಾರ್ಗವಿ ನಾರಾಯಣ್ ಅವರು ಬೆಂಗಳೂರಿನಲ್ಲಿ ಸಂಜೆ 7.30ರಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾರ್ಗವಿ ನಾರಾಯಣ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಆತ್ಮೀಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

1938 ಫೆಬ್ರವರಿ 4ರಂದು ನಾಮಗಿರಿಯಮ್ಮ ಹಾಗೂ ರಾಮಸ್ವಾಮಿಯವರಿಗೆ ಜನಿಸಿದವರು. ಬಿಎಸ್ಸಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಮೇಕಪ ನಾಣಿ ಎಂದೇ ಹೆಸರಾಗಿದ್ದ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರನ್ನು ಭಾರ್ಗವಿಯವರು ವಿವಾಹವಾದರು ಅಲ್ಲದೆ ನಟ ಪ್ರಕಾಶ ಬೆಳವಾಡಿ, ನಟಿ ಸುಧಾ ಬೆಳವಾಡಿ, ಸುಜಾತ, ಭಾರ್ಗವಿ ನಾರಾಯಣ್ ಅವರ ಮಕ್ಕಳು ಇದ್ದಾರೆ.

ಅಭಿನಯಿಸಿದ ಚಿತ್ರಗಳು
ಭಾರ್ಗವಿ ನಾರಾಯಣ್ ಅವರು 60ರ ದಶಕದಲ್ಲೇ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು.ಇತ್ತೀಚಿಗೆ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರಕಾಶ್ ಬೆಳವಾಡಿ ನಿರ್ದೇಶನ ಮಾಡಿದ್ದ ‘ಸ್ಟಂಬಲ್’ ಇಂಗ್ಲಿಷ್ ಸಿನಿಮಾದಲ್ಲಿ ಭಾರ್ಗವಿ ನಟಿಸಿದ್ದರು. ಮಂಥನ, ಮುಕ್ತ ಧಾರಾವಾಹಿಗಳಲ್ಲಿ ನಟಿಸಿದ್ದರು. ಎರಡು ಕನಸು, ಕಾಡ ಬೆಳದಿಂಗಳು,ಪ್ರೀಮಿಯರ್ ಪದ್ಮಿನಿ, ಬಟರ್‌ಫ್ಲೈ, ಪಲ್ಲವಿ ಅನುಪಲ್ಲವಿ, ಬಾನಲ್ಲೆ ಮಧುಚಂದ್ರಕ್ಕೆ, ಮುಯ್ಯಿ, ಸುಬ್ಬಾ ಶಾಸ್ತ್ರೀ,ಅಂತಿಮಘಟ್ಟ, ಪ್ರೊಫೆಸರ್ ಹುಚ್ಚುರಾಯ,ಜಂಬೂಸವಾರಿ, ಇದೊಳ್ಳೆ ರಾಮಾಯಣ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಭಾರ್ಗವಿ ನಾರಾಯಣ್ ಅವರು ಅಭಿನಯ ಮಾತ್ರವಲ್ಲದೆ ಎರಡು ಕೃತಿಗಳನ್ನು ಕೂಡಾ ರಚಿಸಿದ್ದಾರೆ. ನಾನು ‘ಭಾರ್ಗವಿ ಅವರ ಆತ್ಮಕಥೆ’ ಹಾಗೂ ‘ನಾ ಕಂಡ ನಮ್ಮವರು’ ಎಂಬ ಕೃತಿಗಳನ್ನು ರಚಿಸಿದ್ದಾರೆ. ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ನಟಿ ಭಾರ್ಗವಿ ನಾರಾಯಣ್ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದೆ.
ಇದನ್ನೂ ಓದಿ:Senior Actor Shivaram ಹಿರಿಯ ನಟ ಶಿವರಾಂ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ