ನವದೆಹಲಿ: (ಫೆ.12):Drugs: ಮಾದಕ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವ 272 ಜಿಲ್ಲೆಗಳನ್ನು ಕೇಂದ್ರ ಸರಕಾರ ಪಟ್ಟಿ ಮಾಡಿದೆ. ಈ ಪೈಕಿ ಕರ್ನಾಟಕದ ಕೊಡಗು, ಉಡುಪಿ ಸೇರಿದಂತೆ 6 ಜಿಲ್ಲೆಗಳು ಸೇರಿವೆ.
ಬಿಜೆಪಿಯ ಕೆ.ಸಿ.ರಾಮಮೂರ್ತಿ ಅವರು ಕೇಳಿದ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರಿಸಿರುವ ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಈ ವಿಷಯ ತಿಳಿಸಿದ್ದಾರೆ.

ದೇಶದ 272 ಜಿಲ್ಲೆಗಳನ್ನು ಹೆಚ್ಚಾಗಿ ಮಾದಕವಸ್ತು ಬಳಸುವ ಜಿಲ್ಲೆಗಳೆಂದು ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಕರ್ನಾಟಕದ ಬೆಂಗಳೂರು, ಕೋಲಾರ, ಮೈಸೂರು, ಕೊಡಗು, ಉಡುಪಿ ಮತ್ತು ರಾಮನಗರ ಜಿಲ್ಲೆಗಳೂ ಸೇರಿವೆ ಎಂದು ವರದಿ ಮಾಡಿದೆ. ಈ ಜಿಲ್ಲೆಗಳಲ್ಲಿ ‘ನಶೆ ಮುಕ್ತ ಭಾರತ ಅಭಿಯಾನ’ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
ನಶೆ ಮುಕ್ತ ಭಾರತ ಅಭಿಯಾನದಡಿ ಮಾದಕವಸ್ತು ವ್ಯಸನಿಗಳನ್ನು ಗುರುತಿಸಿ ಸ್ವಯಂಸೇವಕರು ಸಮಾಲೋಚನೆ ನಡೆಸಲಿದ್ದು, ಅವರನ್ನು ವ್ಯಸನ ಮುಕ್ತರನ್ನಾಗಿಸಲು ಒತ್ತು ನೀಡುವರು. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ಸಂಸ್ಥೆಗಳೂ ಈ ಕಾರ್ಯಕ್ಕೆ ನೆರವಾಗಲಿದ್ದು, ಸಹಜ ಜೀವನಕ್ಕೆ ಮರಳುವಂತೆ ವ್ಯಸನಿಗಳಿಗೆ ಚಿಕಿತ್ಸೆ ನೀಡುವುದರೊಂದಿಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.