Rahul Bajaj: (ಫೆ.12): ಖ್ಯಾತ ಉದ್ಯಮಿ ಮತ್ತು ಬಜಾಜ್ ಸಮೂಹಗಳ (Bajaj Group) ಚೇರ್ಮನ್ ರಾಹುಲ್ ಬಜಾಜ್ (Rahul Bajaj) ಇಂದು ಪುಣೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ರಾಹುಲ್ ಬಜಾಜ್ ಅವರಿಗೆ ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯೂ ಇತ್ತು. ಕಳೆದ ಒಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ರೂಬಿ ಹಾಲ್ ಕ್ಲಿನಿಕ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪುರವೇಜ್ ಗ್ರಾಂಟ್ ಹೇಳಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ರಾಹುಲ್ ಬಜಾಜ್ ಕೊನೆಯುಸಿರೆಳೆದಿದ್ದಾರೆ.

ರಾಹುಲ್ ಬಜಾಜ್ ಸಾವನ್ನಪ್ಪುವಾಗ ಅವರ ಆಪ್ತ ಕುಟುಂಬಸ್ಥರು ಪಕ್ಕದಲ್ಲೇ ಇದ್ದರು ಎಂದು ಬಜಾಜ್ ಗ್ರೂಪ್‌ನ ಪ್ರಕಟಣೆ ತಿಳಿಸಿದೆ. ರಾಹುಲ್ ಬಜಾಜ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸುಮಾರು ಮೂರು ದಶಕಗಳ ಕಾಲ ಕಂಪನಿಯ ಚುಕ್ಕಾಣಿ ಹಿಡಿದಿದ್ದ ರಾಹುಲ್ ಬಜಾಜ್ ನಂತರ ಅವರ ಸ್ಥಾನಕ್ಕೆ ಬಜಾಜ್ ಫೈನಾನ್ಸ್ ಉಪಾಧ್ಯಕ್ಷರಾಗಿರುವ ಸಂಜೀವ್ ಬಜಾಜ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.