Unemployment Rate: (ಫೆ.10): ಭಾರತದಲ್ಲಿ ನಿರುದ್ಯೋಗದಿಂದಾಗಿ ಯುವಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೌದು ಈ ಆತಂಕಕಾರಿ ಮಾಹಿತಿಯನ್ನು ಕೇಂದ್ರ ಸರ್ಕಾರವೇ ನೀಡಿದೆ. 2018ರಿಂದ 2020ರ ಮೂರು ವರ್ಷಗಳಲ್ಲಿ ದೇಶದಲ್ಲಿ ಬರೋಬ್ಬರಿ 25 ಸಾವಿರ ಮಂದಿ ನಿರುದ್ಯೋಗ ಹಾಗೂ ಸಾಲಭಾದೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಈ ಮಾಹಿತಿಯನ್ನು ಒದಗಿಸಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಒದಗಿಸಿದ ದತ್ತಾಂಶವನ್ನು ಆಧರಿಸಿ ಸರ್ಕಾರದ ಅಂಕಿಅಂಶಗಳನ್ನು ನೀಡಿದೆ
ಕೇಂದ್ರ ಸರ್ಕಾರ ಸಂಸತ್‌ಗೆ ಈ ಬಗ್ಗೆ ಲಿಖಿತ ಉತ್ತರ ನೀಡಿದ್ದು,ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ನಿರುದ್ಯೋಗದ ವಿಷಯ ಸಂಸತ್ತಿನಲ್ಲಿ ಚರ್ಚೆಯಾಗುತ್ತಿದೆ. 2018 ಮತ್ತು 2020ರ ನಡುವೆ 25,000ಕ್ಕೂ ಹೆಚ್ಚು ಭಾರತೀಯರು ನಿರುದ್ಯೋಗ ಹಾಗೂ ಸಾಲದ ಕಾರಣದಿಂದ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಸುಮಾರು 9,140 ಜನರು ನಿರುದ್ಯೋಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ 16,091 ಜನರು ದಿವಾಳಿತನ, ಸಾಲದ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರವು ಮೇಲ್ಮನೆಗೆ ತಿಳಿಸಿದೆ.
ನಿರುದ್ಯೋಗ ಸಮಸ್ಯೆಗೆ ಯಾವುದೇ ಬಜೆಟ್ ಇಲ್ಲ:
2020ರಲ್ಲಿ 3,548 ಮಂದಿ ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ 2,741 , 2019ರಲ್ಲಿ 2,851 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ 4,970 ಮಂದಿ ದಿವಾಳಿತನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ 2019ರಲ್ಲಿ ಈ ಸಂಖ್ಯೆ 5,908ಕ್ಕೆ ಏರಿಕೆಯಾಗಿದೆ. 2020ರಲ್ಲಿ 5,213ಕ್ಕೆ ಇಳಿದಿದೆ. ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಬಜೆಟ್ ಯಾವುದೇ ಪರಿಹಾರ ಒದಗಿಸಿಲ್ಲ ಎಂದು ಆರೋಪಿಸಿ ವಿವಿಧ ವಿರೋಧ ಪಕ್ಷದ ಸಂಸದರು ನಿರುದ್ಯೋಗದ ಸಮಸ್ಯೆಯನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ.
ಕಳೆದ 50 ವರ್ಷಗಳಲ್ಲಿ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಅತಿ ಹೆಚ್ಚು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರ 10 ವರ್ಷಗಳಲ್ಲಿ 27 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದರೆ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 23 ಕೋಟಿ ಜನರನ್ನು ಮತ್ತೆ ಬಡತನಕ್ಕೆ ತಳ್ಳಿದೆ ಎಂದು ಅವರು ಹೇಳಿದ್ದರು.