ಮುಂಬೈ: (ಫೆ.6) :Lata Mangeshkar: ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಇಂದು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. 92 ವರ್ಷ ವಯಸ್ಸಾಗುತ್ತಾ ಲತಾ ಮಂಗೇಶ್ಕರ್ ಅವರು ಅನಾರೋಗ್ಯದ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಲತಾ ಮಂಗೇಶ್ಕರ್ ಅವರು ಇಂದು ಬಹು ಅಂಗಾಂಗ ವೈಫಲ್ಯದಿಂದ ವಿಧಿವಶರಾಗಿದ್ದಾರೆ.
ಲತಾ ಮಂಗೇಶ್ಕರ್ ಅವರ ನಿಧಾನಕ್ಕೆ ಅನೇಕ ರಾಜಕೀಯ ಗಣ್ಯರು ಸೇರಿದಂತೆ ಚಿತ್ರರಂಗದ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಗಣ್ಯರು ಲತಾ ಮಂಗೇಶ್ಕರ್ ಅವರನ್ನು ನೆನೆದು ಕಂಬನಿ ಮಿಡಿದರು.


ಲತಾ ಮಂಗೇಶ್ಕರ್ ಅವರ ನಿಧನದ ಹಿನ್ನೆಲೆ ದೇಶದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಈ ಸಂದರ್ಭ ರಾಷ್ಟ್ರಧ್ವಜವು ಅರ್ಧ ಮಟ್ಟದಲ್ಲಿ ಹಾರಾಡಲಿದೆ.
ಪಂಚಭೂತಗಳಲ್ಲಿ ಲೀನ:
ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ಪಂಚಭೂತಗಳಲ್ಲಿ ಲೀನರಾದರು. ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ನಡೆಯಿತು.
1929ರ ಸೆ.29ರಂದು ಮಧ್ಯಪ್ರದೇಶದ ಇಂದೋರ್ ನಲ್ಲಿ ಪಂಡಿತ್ ದೀನನಾಥ ಮಂಗೇಶ್ಕರ್ ಪುತ್ರಿಯಾಗಿ ಲತಾ ಮಂಗೇಶ್ಕರ್ ಅವರು ಜನಿಸಿದರು.ಲತಾ ಮಂಗೇಶ್ಕರ್ ಅವರ ಹದಿಮೂರನೇ ವಯಸ್ಸಿನಲ್ಲೇ ವೃತ್ತಿಜೀವನ ಆರಂಭವಾಗಿತ್ತು. 1942 ರಲ್ಲಿ ಗಾಯನದ ವೃತ್ತಿಜೀವನ ಆರಂಭಿಸಿದ್ರು.
ರಂಗನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿಯಾಗಿದ್ದ ಲತಾ ಅವರಿಗೆ ತಂದೆ-ತಾಯಿ ಹೇಮಾ ಎಂದು ಹೆಸರಿಟ್ಟಿದ್ದರು.ಲತಾ ಮಂಗೇಶ್ಕರ ದೇಶ-ವಿದೇಶದ ಸುಮಾರು 36 ಭಾಷೆಗಳಲ್ಲಿ, 30 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಲತಾ ಗಾನಸುಧೆ ‘ ಬೆಳ್ಳನೆ ಬೆಳಗಾಯಿತು’ ಎಂಬ ಕನ್ನಡ ಚಿತ್ರಗೀತೆಗೆ ಸ್ವರ ತುಂಬಿದ್ದರು.ಅವರ ಕಂಠಸಿರಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಪದ್ಮಭೂಷಣ, ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಕೂಡ ಲಭಿಸಿತ್ತು.