ಬೆಂಗಳೂರು: (ಫೆ.5) Uniform Rules: ಕರಾವಳಿಯಲ್ಲಿ ಹಿಜಾಬ್ ಕುರಿತು ಭುಗಿಲೆದ್ದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ತಾರ್ಕಿಕ ಅಂತ್ಯ ನೀಡುವುದಕ್ಕೆ ಮುಂದಾಗಿ, ಎಲ್ಲ ಸರ್ಕಾರಿ ಹಾಗೂ ಖಾಸಗಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ನಿಗದಿಗೆ ಸಂಬಂಧಪಟ್ಟಂತೆ ಶಿಕ್ಷಣ ಇಲಾಖೆಯಿಂದ ಆದೇಶ ಪ್ರಕಟಿಸಲಾಗಿದೆ. ಸಮವಸ್ತ್ರಕ್ಕೆ ಸಂಬಂಧಪಟ್ಟಂತೆ ರಾಜ್ಯಗಳ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಆಧರಿಸಿ ಆದೇಶವನ್ನು ಸಿದ್ಧಪಡಿಸಲಾಗಿದೆ.
ಶಾಲಾ ಅಭಿವೃದ್ಧಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ನಿಗದಿ ಮಾಡಿದ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸುವಂತೆ ಆದೇಶ ಹೊರಡಿಸಿದೆ. ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿ ನಿರ್ಧರಿಸಿದ ಸಮವಸ್ತ್ರವನ್ನು ಧರಿಸುವಂತೆ ಸೂಚನೆ ನೀಡಲಾಗಿದೆ.

ಕರ್ನಾಟಕದಲ್ಲಿ ಸರ್ಕಾರ ಏಕರೂಪದ ಸಮವಸ್ತ್ರವನ್ನು ಜಾರಿಗೊಳಿಸಿದೆ. ಶಾಲಾ-ಕಾಲೇಜಿನಲ್ಲಿ ಏಕರೂಪದ ಸಮವಸ್ತ್ರ ಫಿಕ್ಸ್ ಮಾಡಲಾಗಿದೆ. ಪಿಯು ಕಾಲೇಜುಗಳಲ್ಲಿ ನಿಗದಿಪಡಿಸಿದ ಸಮವಸ್ತ್ರವೇ ಅಂತಿಮವಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧರಿಸಿರುವ ಯೂನಿಫಾರ್ಮ್ ಧರಿಸುವುದು ಕಡ್ಡಾಯವಾಗಿದೆ. ಕಾಲೇಜು ಸಮವಸ್ತ್ರ ನಿಗದಿಪಡಿಸದಿದ್ದರೆ ಸಮರ್ಪಕ ಉಡುಪು ಧರಿಸಬೇಕು. ಸಮಾನತೆ, ಐಕ್ಯತೆ ಜೊತೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಉಡುಪು ಧರಿಸುವುದು ಕಡ್ಡಾಯವಾಗಿದೆ.
ಹಿಜಾಬ್ ಧರಿಸದೆ ಶಾಲೆಗೆ ಬರುವಂತೆ ನಿರ್ದೇಶಿಸುವುದು ಸಂವಿಧಾನದ 25ನೇ ಅನುಚ್ಛೇದನ ಉಲ್ಲಂಘನೆಯಾಗುವುದಿಲ್ಲ ಎಂದು ಈಗಾಗಲೇ ಪ್ರಮಾಣಿತವಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಅನ್ವಯ ರಚಿತವಾದ ನಿಯಮಗಳ ಉಲ್ಲಂಘನೆ ಆಗುವುದಿಲ್ಲ ಎಂದು ಪ್ರತಿಪಾದಿಸಿರುವ ಇಲಾಖೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿದೆ.