ಬೆಂಗಳೂರು: (ಫೆ.5) Senior Cinematographer D C Nagesh:ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಛಾಯಾಗ್ರಾಹಕ ಡಿ.ಸಿ ನಾಗೇಶ್ ಅವರು ಇಂದು ನಿಧನರಾದರು. ಮೂರುವರೆ ದಶಕಗಳ ಕಾಲ ಹವ್ಯಾಸಿ ಸಿನಿಮಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಡಿ.ಸಿ ನಾಗೇಶ್ ಅವರು ಕ್ಯಾನ್ಸರ್ ನಿಂದಾ ಬಳಲುತ್ತಿದ್ದರು. ಇಂದು ಬೆಳಗ್ಗೆ 5.30 ರಲ್ಲಿ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಇಂದು ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

1980ರಿಂದ 2010ರವರೆಗೆ ಸಿನಿಮಾದಲ್ಲಿ ಹೆಚ್ಚು ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಆಹ್ವಾನಿತ ಅತಿಥಿಗಳ ಬದುಕು ಸಾಧನೆಯನ್ನು ಬಿಂಬಿಸುವ ಫೋಟೋ ಎಕ್ಸಿಬಿಶನ್ ಪ್ರಾರಂಭ ಮಾಡಿದ್ದರು.
ಸಿನಿಮಾ ದಿಗ್ಗಜರಾದ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ದರ್ಶನ್, ಸುದೀಪ್ ನಟನೆಯ ಸಾವಿರಾರು ಚಲನಚಿತ್ರಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.ಕನ್ನಡ ಸಿನಿಮಾ ಪತ್ರಿಕೋದ್ಯಮದ ಹಿರಿಯ ಛಾಯಾಗ್ರಾಹಕರಾಗಿದ್ದ ಇವರು ತಮ್ಮ ಫೋಟೋಗ್ರಫಿಯ ಮೂಲಕ ಕನ್ನಡ ಸಿನಿಮಾ ರಂಗದ ಚರಿತ್ರೆಯನ್ನು ದೃಶ್ಯ ಮಾಧ್ಯಮದಲ್ಲಿ ಕಟ್ಟಿ ಕೊಡುತ್ತಿದ್ದರು. ಡಿ.ಸಿ. ನಾಗೇಶ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಬೆಂಗಳೂರು ಪ್ರೆಸ್ ಕ್ಲಬ್ ಸಂತಾಪ ಸೂಚಿಸಿದೆ.
ಚಿತ್ರರಂಗದವರೊಂದಿಗೆ ಆತ್ಮೀಯರಾಗಿ ಬರೆದಿದ್ದವರು ಪ್ರಮುಖ ವಾರಪತ್ರಿಕೆಯ ಮಾಸಪತ್ರಿಕೆಗಳಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡಿದ್ದರು. ಸಿನಿಮಾ ಮಾತ್ರವಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವಾರು ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದರು.
ಚಿತ್ರರಂಗದ ಗಣ್ಯರ ಸಂತಾಪ:
ಸಿನಿಮಾ ಪತ್ರಿಕಾ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಡಿ.ಸಿ.ನಾಗೇಶ್ ಅವರ ನಿಧನಕ್ಕೆ ಇದೀಗ ಸಂಸದೆ ಸುಮಲತಾ ಸೇರಿದಂತೆ ಚಿತ್ರರಂಗದ ಕಲಾವಿದರು ಸೇರಿದಂತೆ ನಾಡಿದ ಪತ್ರಕರ್ತರು ಸಹ ಕಂಬನಿ ಮಿಡಿದಿದ್ದಾರೆ.
ಸಿನಿಮಾ ಪತ್ರಿಕೋದ್ಯಮದ ಹಿರಿಯ ಛಾಯಾಗ್ರಾಹಕ ಡಿ.ಸಿ. ನಾಗೇಶ್ ಅವರ ನಿಧನದ ಸುದ್ದಿ ವೈಯಕ್ತಿಕವಾಗಿ ನನಗೆ ತುಂಬಾ ಆಘಾತ ತಂದಿದೆ. ಲವಲವಿಕೆಯಿಂದ ಮಾತನಾಡುತ್ತಲೇ ನಮ್ಮೆಲ್ಲರ ನೆನಪುಗಳನ್ನು ಸೆರೆ ಹಿಡಿಯುತ್ತಿದ್ದ ಅಪರೂಪದ ವ್ಯಕ್ತಿ ನಾಗೇಶ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವೆ. ಈ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುವೆ ಎಂದು ಸಂಸದೆ ನಟಿ ಸುಮಲತಾ ಅಂಬರೀಶ್ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಬದುಕಿಗೆ ಬಣ್ಣ ಕೊಟ್ಟವರೆಲ್ಲ ಒಬ್ಬೊಬ್ಬರಾಗಿ ನಿರ್ಗಮಿಸುತ್ತಿದ್ದಾರೆ..ನಮ್ಮ ಧಾರಾವಾಹಿಯ ಎಲ್ಲ ಸಂವಾದಗಳಿಗೂ, ಸಮಾರಂಭಗಳಿಗೂ ನಾವು ಪ್ರೀತಿಯಿಂದ, ಆಗ್ರಹದಿಂದ ಕರೆಯುತ್ತಿದ್ದ ಛಾಯಾ ಚಿತ್ರ ಗ್ರಾಹಕ ಡಿ.ಸಿ.ನಾಗೇಶ್.ಮೃದು ಮಾತುಗಳನ್ನು ಬಿಟ್ಟರೆ ಮಿಕ್ಕ ಸಮಯ ಮಹಾ ಮುಗುಳ್ನಗೆ ಯ ಮೌನಿ..ಎಲ್ಲರೂ ಪತ್ರಿಕೆ ಗಳಲ್ಲಿ ನೋಡಿರುತ್ತೀರಿ ಛಾಯಾಚಿತ್ರ ಡಿ.ಸಿ.ನಾಗೇಶ್ ಎಂದು.ನನಗೆ 25 ವರ್ಷಗಳ ಗೆಳೆತನ..ನಿಮ್ಮ, ಯೌವನ, ಸಂಭ್ರಮಗಳೆಲ್ಲಾ ನಮ್ಮ ಮನೆಯ ಹಾರ್ಡ್ ಡಿಸ್ಕ್ ನಲ್ಲಿ ಭದ್ರವಾಗಿದೆ ಎನ್ನುತ್ತಿದ್ದರು ನಗುತ್ತಾ..ವಿಷಾದದ ವಿದಾಯ ನಾಗೇಶ್ ಎಂದು ಕಿರುತೆರೆ ಹಿರಿಯ ನಟ, ನಿರ್ದೇಶಕ ಟಿ ಎಂ ಸೀತಾರಾಮ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.